ದೇಶ

ಎರಡು ಮುಖ: ತರೂರ್ ವಿರುದ್ಧ ಕಾಂಗ್ರೆಸ್ ಚುನಾವಣಾ ಮುಖ್ಯಸ್ಥ ಮಿಸ್ತ್ರಿ ವಾಗ್ದಾಳಿ!

Srinivasamurthy VN

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷಪಾತ ಮತ್ತು ಅಕ್ರಮದ ಆರೋಪ ಮಾಡಿದ್ದ ಶಶಿ ತರೂರ್ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಚುನಾವಣಾ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರು ಎರಡು ಮುಖ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದ ಬಳಿಕ ಅವರ ಪ್ರತಿಸ್ಪರ್ಧಿಯಾಗಿದ್ದ ಶಶಿ ತರೂರ್ ಮತ್ತು ಅವರ ಬೆಂಬಲಿತ ನಾಯಕರು ಚುನಾವಣೆಯನ್ನು ಏಕಪಕ್ಷೀಯ ಮತ್ತು ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು.

ಚುನಾವಣಾ ಮುಖ್ಯಸ್ಥರು ಪಕ್ಷಪಾತ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿರುವ ಮಿಸ್ತ್ರಿ ಅವರು, 'ನಾವು ನಿಮ್ಮ ಮನವಿಗೆ ಮನ್ನಣೆ ನೀಡಿದ್ದೇವೆ ಮತ್ತು ಅದರ ಹೊರತಾಗಿಯೂ ನೀವು ಕೇಂದ್ರ ಚುನಾವಣಾ ಪ್ರಾಧಿಕಾರವು ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿ ಮಾಧ್ಯಮಗಳಿಗೆ ಹೋಗಿದ್ದೀರಿ. ನಮ್ಮೆಲ್ಲರ ಉತ್ತರಗಳಿಂದ ನೀವು ತೃಪ್ತರಾಗಿದ್ದೀರಿ.. ಹೀಗಿದ್ದೂ ಮಾಧ್ಯಮಗಳ ಮುಂದೆ ನೀವಾಡಿರುವ ಮಾತುಗಳು ನಿಮ್ಮ ಮತ್ತೊಂದು ಮುಖದ ಅನಾವರಣ ಮಾಡಿದೆ ಎಂದು ಕಿಡಿಕಾರಿದ್ದಾರೆ.

ನಮ್ಮೊಂದಿಗೆ ಸಂವಹನ ಮಾಡುವಾಗ ಒಂದು ಮುಖವಿದ್ದರೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಮತ್ತೊಂದು ಮುಖವಿತ್ತು ಎಂದು ಹೇಳಲು ನಾನು ವಿಷಾದಿಸುತ್ತೇನೆ ಎಂದು ತರೂರ್ ಅವರ ಮುಖ್ಯ ಚುನಾವಣಾ ಏಜೆಂಟ್ ಸಲ್ಮಾನ್ ಸೋಜ್‌ಗೆ ಮಿಸ್ತ್ರಿ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಬುಧವಾರ ನಡೆಯುತ್ತಿದ್ದಂತೆ, ಅಭ್ಯರ್ಥಿ ಶಶಿ ತರೂರ್ ಅವರ ತಂಡವು ಪಕ್ಷದ ಮುಖ್ಯ ಚುನಾವಣಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಉತ್ತರ ಪ್ರದೇಶದ ಚುನಾವಣೆಯ ನಿರ್ವಹಣೆಯಲ್ಲಿ 'ಅತ್ಯಂತ ಗಂಭೀರ ಅಕ್ರಮಗಳಾಗಿವೆ ಎಂದು ಆರೋಪಿಸಿದ್ದರು.

SCROLL FOR NEXT