ದೇಶ

ಗಾಜಿಯಾಬಾದ್ ಸಾಮೂಹಿಕ ಅತ್ಯಾಚಾರ: ಪ್ರಕರಣದ ತನಿಖೆಗಾಗಿ ಸತ್ಯಶೋಧನಾ ತಂಡ ರಚಿಸಿದ ಮಹಿಳಾ ಆಯೋಗ

Ramyashree GN

ನವದೆಹಲಿ: ಗಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗವು ಇಬ್ಬರು ಸದಸ್ಯರ ಸತ್ಯಶೋಧನಾ ತಂಡವನ್ನು ಕಳುಹಿಸಲಿದೆ.

ಮಾಧ್ಯಮದ ವರದಿಗಳ ಪ್ರಕಾರ, ದೆಹಲಿಯಲ್ಲಿ ಮನೆಗೆ ಮರಳಲು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದ 38 ವರ್ಷದ ಮಹಿಳೆಯನ್ನು ಗಾಜಿಯಾಬಾದ್ ರಾಜ್‌ನಗರ ಎಕ್ಸ್‌ಟೆನ್ಶನ್‌ನ ಆಸ್ರಮ ರಸ್ತೆಯಲ್ಲಿ ಗನ್‌ಪಾಯಿಂಟ್‌ನಿಂದ ಅಪಹರಿಸಲಾಗಿದೆ. ಅಲ್ಲಿ ಆಕೆಯನ್ನು ಎರಡು ದಿನಗಳ ಕಾಲ ಸೆರೆಯಲ್ಲಿಟ್ಟು, ಐವರು ಅತ್ಯಾಚಾರ ಎಸಗಿದ್ದರು ಎಂದು ವರದಿಯಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಮಹಿಳಾ ಆಯೋಗ, 'ಮಹಿಳಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ ಮತ್ತು ಸಂತ್ರಸ್ತೆಯ ಕುಟುಂಬ ಹಾಗೂ ಸಂಬಂಧಿತ ಅಧಿಕಾರಿಗಳನ್ನು ಭೇಟಿ ಮಾಡಲು ಇಬ್ಬರು ಸದಸ್ಯರನ್ನೊಳಗೊಂಡ ಸತ್ಯಶೋಧನಾ ತಂಡವನ್ನು ಕಳುಹಿಸಲಾಗುತ್ತಿದೆ' ಎಂದು ಹೇಳಿದೆ.

ಇದಕ್ಕೂ ಮುನ್ನ, 38 ವರ್ಷದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಹತ್ಯೆಯನ್ನು ನೆನಪಿಸುತ್ತಿದೆ ಎಂದಿದ್ದ ಮಹಿಳಾ ಆಯೋಗ, ಈ ಸಂಬಂಧ ಗಾಜಿಯಾಬಾದ್‌ ಎಸ್‌ಪಿಗೆ ನೋಟಿಸ್‌ ಜಾರಿಗೊಳಿಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಂಡ ವರದಿ ಮತ್ತು ಎಫ್‌ಐಆರ್‌ ಪ್ರತಿಯೊಂದಿಗೆ ಇನ್ನಿತರ ದಾಖಲೆ ಒದಗಿಸುವಂತೆ ಕೇಳಿತ್ತು.

SCROLL FOR NEXT