ದೇಶ

ಅರುಣಾಚಲದಲ್ಲಿ ಹೆಲಿಕಾಪ್ಟರ್ ಪತನ: 5ನೇ ಸೇನಾ ಸಿಬ್ಬಂದಿಯ ಮೃತದೇಹ ಪತ್ತೆ

Lingaraj Badiger

ಗುವಾಹಟಿ: ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಪತನಗೊಂಡಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ನಾಪತ್ತೆಯಾಗಿದ್ದ ಮತ್ತೊಬ್ಬ ಸಿಬ್ಬಂದಿಯ ಮೃತದೇಹ ಶನಿವಾರ ಪತ್ತೆಯಾಗಿದ್ದು, ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಇಬ್ಬರು ಪೈಲಟ್‌ಗಳು ಸೇರಿದಂತೆ ಐವರು ಸೇನಾ ಸಿಬ್ಬಂದಿಯನ್ನು ಹೊತ್ತ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಹೆಚ್) ನಿಯಮಿತ ಕಾರ್ಯಾಚರಣೆಯಲ್ಲಿದ್ದಾಗ ಶುಕ್ರವಾರ ಬೆಳಗ್ಗೆ 10.43ಕ್ಕೆ ಟ್ಯೂಟಿಂಗ್‌ನಿಂದ ದಕ್ಷಿಣಕ್ಕೆ 25 ಕಿಮೀ ದೂರದಲ್ಲಿರುವ ಮಿಗ್ಗಿಂಗ್ ಬಳಿ ಪತನಗೊಂಡಿತು ಎಂದು ಅವರು ಹೇಳಿದ್ದಾರೆ.

ಚೀನಾದ ಗಡಿಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ದಟ್ಟವಾದ ಕಾಡಿನ ಪರ್ವತ ಪ್ರದೇಶದಲ್ಲಿ ಇತರ ನಾಲ್ವರು ಸಿಬ್ಬಂದಿಯ ಮೃತದೇಹಗಳನ್ನು ಶುಕ್ರವಾರ ಸಂಜೆ ವಶಪಡಿಸಿಕೊಳ್ಳಲಾಗಿತ್ತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಎ ಎಸ್ ವಾಲಿಯಾ ತಿಳಿಸಿದ್ದಾರೆ.

ಮೃತ ಸೇನಾ ಸಿಬ್ಬಂದಿಯನ್ನು ಪೈಲಟ್‌ಗಳಾದ ಮೇಜರ್ ವಿಕಾಸ್ ಭಂಭು ಮತ್ತು ಮೇಜರ್ ಮುಸ್ತಫಾ ಬೊಹರಾ, ಸಿಎಫ್‌ಎನ್ ಟೆಕ್ ಎವಿಎನ್(ಎಇಎನ್) ಅಸ್ವಿನ್ ಕೆ ವಿ, ಹವಾಲ್ದಾರ್ (ಒಪಿಆರ್) ಬೀರೇಶ್ ಸಿನ್ಹಾ ಮತ್ತು ಎನ್‌ಕೆ(ಪಿಪಿಆರ್) ರೋಹಿತಾಶ್ವ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT