ದೇಶ

ಮಾಧ್ಯಮಗಳ ಪ್ರೈಮ್ ಟೈಮ್ ಚರ್ಚೆಯ ವಿಷಯ ನೋಡಿ ಆಶ್ಚರ್ಯವಾಯಿತು: ಮೆಹಬೂಬಾ ಮುಫ್ತಿ

Lingaraj Badiger

ಶ್ರೀನಗರ: ಮಾಧ್ಯಮಗಳ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ಮಾಧ್ಯಮಗಳು ನೈಜ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು ಜಮ್ಮು ಮತ್ತು ಕಾಶ್ಮೀರ ಆಡಳಿತ ತಮಗೆ ಬಂಗಲೆ ತೆರವು ನೋಟಿಸ್ ಜಾರಿ ಬಗ್ಗೆ ಚರ್ಚಿಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿವೆ ಎಂದು ಹೇಳಿದ್ದಾರೆ.

ಕಾಶ್ಮೀರ ಆಡಳಿತವು ಈ ವಾರದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿಗೆ ಸರ್ಕಾರಿ ಬಂಗಲೆ ತೆರವು ನೋಟಿಸ್ ನೀಡಿತ್ತು. ಮುಪ್ತಿ ಹೆಚ್ಚಿನ ಭದ್ರತೆಯ ಗುಪ್ಕರ್ ರಸ್ತೆಯಲ್ಲಿರುವ ಬಂಗಲೆಯನ್ನು ಬಳಸಲು ಅರ್ಹರಲ್ಲ ಎಂದು ಸರ್ಕಾರ ಹೇಳಿದೆ.

"ಮಾಧ್ಯಮಗಳು ಮೆಹಬೋಬಾ ಮುಫ್ತಿ ಅವರು ಬಂಗಲೆ ಖಾಲಿ ಮಾಡುವಂತಹ ವಿಷಯಗಳ ಬಗ್ಗೆ ಚರ್ಚಿಸುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಆದರೆ ಅವರು ಅದನ್ನು ಮಾಡುತ್ತಿಲ್ಲ" ಎಂದು ಪಿಡಿಪಿ ನಾಯಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಾಸ್‌ಪೋರ್ಟ್ ವಶಪಡಿಸಿಕೊಳ್ಳುವುದು, ಜಾರಿ ನಿರ್ದೇಶನಾಲಯದ ವಿಚಾರಣೆ ಅಥವಾ ಬಂಗಲೆ ತೆರವು ನೋಟಿಸ್‌ಗಳ ಬಗ್ಗೆ ಮಾಧ್ಯಮಗಳ ಪ್ರೈಮ್ ಟೈಮ್ ನಲ್ಲಿ ಚರ್ಚೆಯಾಗುತ್ತಿರುವುದು ನೋಡಿ ನನಗೆ ಆಶ್ಚರ್ಯವಾಯಿತು ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

"ನನಗೆ ಏನಾದರೂ ಆಶ್ಚರ್ಯವಾದರೆ, ಅದು (ಟಿವಿ) ಮಾಧ್ಯಮಗಳ ಆದ್ಯತೆಗಳ ಬಗ್ಗೆ" ಎಂದು ಅವರು ಕಿಡಿ ಕಾರಿದ್ದಾರೆ.

SCROLL FOR NEXT