ದೇಶ

ಮಹಿಳೆಗೆ ಕಪಾಳ ಮೋಕ್ಷ ಪ್ರಕರಣ: ಕ್ಷಮೆ ಕೋರಿದ ಸಚಿವ ಸೋಮಣ್ಣ

Srinivas Rao BV

ಚಾಮರಾಜನಗರ: ತಾವು ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬಗ್ಗೆ ಸಚಿವ ವಿ ಸೋಮಣ್ಣ ಕ್ಷಮೆ ಯಾಚಿಸಿದ್ದಾರೆ.

ಈ ಘಟನೆ ಘಟನೆಯೇ ಅಲ್ಲ. ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಈ ಕಾರ್ಯಕ್ರಮವನ್ನು ಸಮಾಜದ ದೀನದಲಿತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಆಯೋಜಿಸಲಾಗಿತ್ತು. ನಾನು ಯಾರೊಂದಿಗೂ ಅಸಭ್ಯವಾಗಿ ವರ್ತಿಸಿಲ್ಲವಾದರೂ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಹಾಗೂ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಪತ್ರಕರ್ತರಿಗೆ ಸೋಮಣ್ಣ ಹೇಳಿದ್ದಾರೆ. 

ಘಟನೆ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿರುವ ಸಚಿವರು, ಕೆಂಪಮ್ಮ ಎಂಬಾಕೆ ಪದೇ ಪದೇ ವೇದಿಕೆಗೆ ಆಗಮಿಸುತ್ತಿದ್ದರು ಇದರಿಂದ ಅಸಮಾಧಾನಗೊಂಡು ಆಕೆಗೆ ವೇದಿಕೆ ಮೇಲೆ ಬರಬೇಡಿ ಎಂದು ಹೇಳುವಂತಹ ಪರಿಸ್ಥಿತಿ ಉಂಟಾಯಿತು. 

ವೇದಿಕೆಯಿಂದ ಕೆಳಗೆ ಇಳಿದ 10 ನಿಮಿಷಗಳಲ್ಲೇ ಆಕೆಯ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರಾದರೂ ಆಕೆ ಕಿರಿಕಿರಿ ಉಂಟು ಮಾಡುತ್ತಿದ್ದರು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ಸೋಮಣ್ಣ ಕಪಾಳಮೋಕ್ಷ
 
ಆಕೆಯತ್ತ ಬೆರಳು ಮಾಡಿತೋರುವಮೂಲಕ ಪಕ್ಕದಲ್ಲಿ ನಿಲ್ಲುವಂತೆ ಮಾಡಲು ಯತ್ನಿಸುತ್ತಿದ್ದೆ. ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ನಾನೂ ಸಹ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದಲೇ ಬಂದವನಾಗಿದ್ದೇನೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
ಶನಿವಾರ ಹಂಗಳ ಗ್ರಾಮದ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು. ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸಚಿವರು ಸಂಜೆ 6.30ಕ್ಕೆ ಆಗಮಿಸಿದರು. ಈ ವೇಳೆ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಚಿವರ ಬಳಿ ತೆರಳಿದರು. ಸಮಸ್ಯೆ ಹೇಳಿಕೊಳ್ಳಲು ತೆರಳಿದ ಮಹಿಳೆಗೆ ಸೋಮಣ್ಣ ಅವರು ಕಪಾಳಮೋಕ್ಷ ಮಾಡಿದರು. ಈ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

SCROLL FOR NEXT