ದೇಶ

ಕಾರ್ಯಕಾರಿ ಸಮಿತಿಗೆ ಪರ್ಯಾಯ ಸಮಿತಿ ರಚಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ; ಸೋನಿಯಾ, ರಾಹುಲ್, ಡಾ. ಸಿಂಗ್ ಸೇರಿ ಹಲವರಿಗೆ ಸ್ಥಾನ

Srinivasamurthy VN

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ದಿನವೇ ಮಹತ್ವ ಸಭೆ ಕೈಗೊಂಡು ಈ ಹಿಂದಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ರದ್ದು ಮಾಡಿ ನೂತನ ಪರ್ಯಾಯ ಸಮಿತಿ (ಸ್ಟೀರಿಂಗ್ ಕಮಿಟಿ)ಯನ್ನು ರಚಿಸಿದ್ದಾರೆ.

ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಸೇರಿದಂತೆ 47 ಸದಸ್ಯರನ್ನೊಳಗೊಂಡ ಚಾಲನಾ ಸಮಿತಿ (ಸ್ಟೀರಿಂಗ್ ಸಮಿತಿ)ಯನ್ನು ರಚಿಸಿದ್ದಾರೆ. ಈ ಸಮಿತಿಯು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿದೆ. ಸರ್ವಸದಸ್ಯರ ಅಧಿವೇಶನ ನಡೆಯುವವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಮುಂದಿನ ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಅಧಿವೇಶನದಲ್ಲಿ ಕಾರ್ಯಕಾರಿ ಸಮಿತಿಯ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿದೆ.

ಇಂದು ಬೆಳಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಸಭಾತ್ಯಾಗ ಮಾಡಿದ್ದು, ಹೊಸ ಮುಖ್ಯಸ್ಥರು ಆಯ್ಕೆಯಾದಾಗ ಅವರು ತಮ್ಮ ತಂಡವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಲು ಇದು ಸಮಾವೇಶದ ಭಾಗವಾಗಿತ್ತು. ಎಲ್ಲಾ ಸಿಡಬ್ಲ್ಯುಸಿ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಎಲ್ಲಾ ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ಈಗ ಆರಂಭವಾಗಿರುವ ಸಂಚಾಲನಾ ಸಮಿತಿಯಲ್ಲಿ ಜವಾಬ್ದಾರಿ ಪಡೆದಿದ್ದಾರೆ.
 

SCROLL FOR NEXT