ದೇಶ

'ಕೇವಲ ನಾಲ್ವರಿಂದ ಟಿಆರ್‌ಎಸ್ ಸರ್ಕಾರ ಬೀಳಿಸಲು ಸಾಧ್ಯವೇ?': ಶಾಸಕರ ಖರೀದಿ ಆರೋಪ ತಳ್ಳಿಹಾಕಿದ ಕೇಂದ್ರ ಸಚಿವ

Lingaraj Badiger

ಹೈದರಾಬಾದ್‌: ಮೊಯಿನಾಬಾದ್‌ ಫಾರ್ಮ್‌ಹೌಸ್‌ ಘಟನೆಯನ್ನು ಹಾಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಅಥವಾ ಆರೋಪಿಗಳು ವಿವಿಧ ರಾಜ್ಯಗಳಿಂದ ಬಂದಿರುವ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಅವರು ಗುರುವಾರ ಹೇಳಿದ್ದಾರೆ.

ಇದೇ ವೇಳೆ ನೂರು ಕೋಟಿ ಆಮಿಷವೊಡ್ಡಿ ಟಿಆರ್‌ಎಸ್ ಪಕ್ಷದ ನಾಲ್ವರು ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರ ಪ್ರತಿಕೃತಿ ದಹಿಸಿ ಟಿಆರ್‌ಎಸ್ ಮುಖಂಡರ ಪ್ರತಿಭಟನೆ ನಡೆಸುತ್ತಿರುವುದನ್ನು ಕೇಂದ್ರ ಸಚಿವರು ಖಂಡಿಸಿದರು.

ಇಂದು ನಾಂಪಲ್ಲಿಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರೆಡ್ಡಿ, ಮುನುಗೋಡು ಉಪಚುನಾವಣೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಗತಿ ಭವನದಲ್ಲಿ ಟಿಆರ್‌ಎಸ್ ಸೃಷ್ಟಿಸಿದ ನಾಟಕ ಎಂದರು. ಅಲ್ಲದೆ ಶಾಸಕರ ಖರೀದಿ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.

ಕೇವಲ ನಾಲ್ವರು ಶಾಸಕರು ಬಿಜೆಪಿ ಸೇರಿದ ಮಾತ್ರಕ್ಕೆ ಟಿಆರ್‌ಎಸ್ ಸರ್ಕಾರವನ್ನು ಬೀಳಿಸಲು ಸಾಧ್ಯವೇ? ಈ ನಾಲ್ವರು ಶಾಸಕರು ತಮ್ಮ ಕ್ಷೇತ್ರದ ಜನರಿಂದ ಬೆಂಬಲ ಪಡೆದಿದ್ದಾರೆಯೇ ಮತ್ತು ಅವರು ಪ್ರಾಮಾಣಿಕರೇ? ಎಂದು ಅವರು ಪ್ರಶ್ನಿಸಿದರು.

SCROLL FOR NEXT