ದೇಶ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಕ್‌ ಉಗ್ರನ ಆಡಿಯೋ ಕ್ಲಿಪ್ ಪ್ಲೇ ಮಾಡಿದ ಭಾರತ!

Manjula VN

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಭಾರತವು ಪಾಕ್ ಮೂಲಕ ಉಗ್ರ ಸಾಜಿದ್ ಮಿರ್'ನ ಆಡಿಯೋ ಕ್ಲಿಪ್'ನ್ನು ಪ್ಲೇ ಮಾಡಿದೆ. 

ಈ ಆಡಿಯೋ ಕ್ಲಿಪ್ ನಲ್ಲಿ ಮುಂಬೈ 26/11 ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಚಾಬಾದ್ ಹೌಸ್ ಮೇಲಿನ ದಾಳಿಗೆ ನಿರ್ದೇಶನ ನೀಡುತ್ತಿರುವ ಮಾತುಗಳನ್ನು ಕೇಳಬಹುದಾಗಿದೆ. ಇದು ಪಾಕಿಸ್ತಾನದ ವಿರುದ್ಧ ಸಿಕ್ಕಿರುವ ಬಲಿಷ್ಠ ಪುರಾವೆಯಾಗಿದೆ.

ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡಿದ ಜೈಶಂಕರ್, “ಭಾರತೀಯ ಪೊಲೀಸ್ ಪಡೆಗಳ 18 ಸದಸ್ಯರು, 12 ತಾಜ್ ಹೋಟೆಲ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಕರ್ತವ್ಯದ ಸಾಲಿನಲ್ಲಿ ಹುತಾತ್ಮರಾಗಿದ್ದಾರೆ. ನಾವು 26/11 ಸ್ಮಾರಕ ಸ್ಥಳದಲ್ಲಿ ಅವರಿಗೆ ಗೌರವ ಸಲ್ಲಿಸುತ್ತೇವೆ. ಅವರ ಶೌರ್ಯ ಮತ್ತು ಅವರ ಸಂಕಲ್ಪವನ್ನು ನಾವು ವಂದಿಸುತ್ತೇವೆ” ಎಂದು ಹೇಳಿದರು.

ಜೈಶಂಕರ್ ಅವರು ತಮ್ಮ ಭಾಷಣದಲ್ಲಿ, ಇದು ಕೇವಲ ಮುಂಬೈ ಮೇಲಿನ ದಾಳಿಯಲ್ಲ, ಇದು ಅಂತರರಾಷ್ಟ್ರೀಯ ಸಮುದಾಯದ ಮೇಲಿನ ದಾಳಿ ಎಂದು ತಿಳಿಸಿದರು.

ವಿಶ್ವಸಂಸ್ಥೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವರು, “ಭಯೋತ್ಪಾದಕರನ್ನು ಹೊಣೆಗಾರರನ್ನಾಗಿಸುವುದನ್ನು ಮತ್ತು ನ್ಯಾಯವನ್ನು ದೊರಕಿಸಿಕೊಡುವುದನ್ನು ಅಂತರಾಷ್ಟ್ರೀಯ ಸಮುದಾಯವು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶವನ್ನು ನಾವು ಒಟ್ಟಿಗೆ ರವಾನಿಸಬೇಕು. 26/11 ಅನ್ನು ಎಂದಿಗೂ ಮರೆಯಲಾಗುವುದಿಲ್ಲ” ಎಂದರು.

SCROLL FOR NEXT