ದೇಶ

ಕೊಯಮತ್ತೂರು ಸ್ಫೋಟ ಪ್ರಕರಣದಲ್ಲಿ ಕೇರಳದ ಪಿಎಫ್‌ಐ ಮಾಜಿ ಕಾರ್ಯದರ್ಶಿ ರೌಫ್ ಪಾತ್ರದ ಬಗ್ಗೆ ತನಿಖೆ

Ramyashree GN

ಚೆನ್ನೈ: ಇತ್ತೀಚಿನ ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕೇರಳ ರಾಜ್ಯ ಮಾಜಿ ಕಾರ್ಯದರ್ಶಿ ಸಿ.ಎ. ರೌಫ್‌ ಅವರ ಪಾತ್ರದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ತಮಿಳುನಾಡು ಪೊಲೀಸರು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ದೇಶದಲ್ಲಿ ಪಿಎಫ್‌ಐ ನಿಷೇಧಿಸಿದಾಗಿನಿಂದ ತಲೆಮರೆಸಿಕೊಂಡಿದ್ದ ರೌಫ್‌ನನ್ನು ಗುರುವಾರ ಮುಂಜಾನೆ ಎನ್‌ಐಎ ಕೇರಳದ ಪಟ್ಟಾಂಬಿಯಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ.

ಪಾಲಕ್ಕಾಡ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ಮುಖಂಡ ಶ್ರೀನಿವಾಸನ್‌ ಹತ್ಯೆ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಆರ್‌ಎಸ್‌ಎಸ್‌ನ ಮಾಜಿ ಜಿಲ್ಲಾ ಮಟ್ಟದ ನಾಯಕರಾಗಿದ್ದ ಶ್ರೀನಿವಾಸನ್ ಹತ್ಯೆಯ ಪ್ರಮುಖ ಸಂಚುಕೋರರಲ್ಲಿ ಈತನೂ ಒಬ್ಬ ಎಂದು ಕೇರಳ ಪೊಲೀಸರು ಪ್ರಕರಣದಲ್ಲಿ ಆತನನ್ನು ಬಂಧಿಸಿದ್ದಾರೆ.

ದೇಶದಲ್ಲಿ ಪಿಎಫ್‌ಐ ನಿಷೇಧಿಸಿದಾಗಿನಿಂದ ರೌಫ್ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.

ಅಕ್ಟೋಬರ್ 23 ರಂದು ಕೊಯಮತ್ತೂರು ಕಾರು ಸ್ಫೋಟದಲ್ಲಿ ಸುಟ್ಟು ಕರಕಲಾದ ಜಮೀಶಾ ಮುಬಿನ್ ಕೇರಳಕ್ಕೆ ಹಲವು ಬಾರಿ ಭೇಟಿ ನೀಡಿದ್ದು, ಅಲ್ಲಿ ಪಿಎಫ್‌ಐ ಆಶ್ರಯ ನೀಡಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಮತ್ತೊಬ್ಬ ಆರೋಪಿ ಫಿರೋಜ್ ಇಸ್ಮಾಯಿಲ್ ಎಂಬಾತ ಇಸ್ಲಾಮಿಕ್ ಸ್ಟೇಟ್ (ಐಎಸ್) ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡಿದ್ದಾನೆ. ಇದೇ ಕಾರಣಕ್ಕಾಗಿಯೇ 2019ರಲ್ಲಿ ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ಶ್ರೀಲಂಕಾದ ಈಸ್ಟರ್ ಬಾಂಬ್ ದಾಳಿಯ ಸಂಚುಕೋರ ಮೊಹಮ್ಮದ್ ಅಜರುದ್ದೀನ್‌ನನ್ನು ಭೇಟಿಯಾಗಿ ಹಲವು ಬಾರಿ ಕೇರಳಕ್ಕೆ ಹೋಗಿದ್ದೆ ಎಂದು ಫಿರೋಜ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಅಜರುದ್ದೀನ್ ಸದ್ಯ ವಿಯ್ಯೂರು ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಪಿಎಫ್‌ಐ ನಿಷೇಧದ ನಂತರ ರೌಫ್, ಹರತಾಳವನ್ನು ಆಯೋಜಿಸಿದ್ದರು. ಇದು ಸಾರಿಗೆ ಬಸ್‌ಗಳು ಮತ್ತು ಮೋಟಾರು ವಾಹನಗಳ ಮೇಲೆ ವ್ಯಾಪಕ ಕಲ್ಲುತೂರಾಟ ಮತ್ತು ದೈಹಿಕ ಹಲ್ಲೆಗೆ ಕಾರಣವಾಯಿತು.

ಕೇಂದ್ರ ಗುಪ್ತಚರ ಸಂಸ್ಥೆಗಳು ರೌಫ್ ಅವರ ಫೋನ್ ವಿವರಗಳನ್ನು ಪತ್ತೆಹಚ್ಚುತ್ತಿವೆ ಮತ್ತು ಕಾರು ಸ್ಫೋಟ ಪ್ರಕರಣದಲ್ಲಿ ಮೃತ ಜಮೀಶಾ ಮುಬಿನ್ ಮತ್ತು ಆರೋಪಿಗಳಾಗಿ ಯುಎಪಿಎ ಅಡಿಯಲ್ಲಿ ಜೈಲು ಪಾಲಾಗಿರುವ ಆತನ ಆರು ಸಹಚರರನ್ನು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

SCROLL FOR NEXT