ದೇಶ

ಮೊರ್ಬಿ ಸೇತುವೆ ಕುಸಿತ: 150-200 ಜನ ಸಾಮರ್ಥ್ಯದ ಸೇತುವೆ ಪ್ರವೇಶಿಸಲು 650 ಮಂದಿಗೆ ಟಿಕೆಟ್!

Lingaraj Badiger

ಅಹಮದಾಬಾದ್: ಗುಜರಾತ್‌ನ ಮೊರ್ಬಿಯಲ್ಲಿ ಅಕ್ಟೋಬರ್ 30 ಒಂದು 'ಕಪ್ಪು ಭಾನುವಾರ'ವಾಗಿ ದಾಖಲಾಗಿದ್ದು, ಪ್ರಸಿದ್ಧ ತೂಗು ಸೇತುವೆ ಮೇಲೆ ನಡೆಯಲು 17 ರೂ. ಕೊಟ್ಟು ಪಡೆದ ಪಾಸ್ ಅನೇಕರಿಗೆ ಸಾವಿನ ಟಿಕೆಟ್ ಆಗಿ ಪರಿಣಮಿಸಿದೆ.

15 ವರ್ಷಗಳ ಕಾಲ ಸೇತುವೆಯ ನಿರ್ವಹಣೆ ಮತ್ತು ಉಸ್ತುವಾರಿ ವಹಿಸಿಕೊಂಡ ಒರೆವಾ ಕಂಪನಿಯು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಶತಮಾನದಷ್ಟು ಹಳೆಯದಾದ, ಕೇವಲ 150 ರಿಂದ 200 ಜನ ಸಾಮರ್ಥ್ಯದ ಸೇತುವೆ ಪ್ರವೇಶಿಸಲು ಬರೋಬ್ಬರಿ 650 ಜನರಿಗೆ ಟಿಕೆಟ್ ನೀಡಲಾಗಿದ್ದು, ಇದು ದುರಂತಕ್ಕೆ ಕಾರಣವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಈ ತೂಗು ಸೇತುವೆ ಪ್ರವೇಶಿಸಲು ಸುಮಾರು 650 ಟಿಕೆಟ್‌ಗಳನ್ನು ಭಾನುವಾರ ಮಾರಾಟ ಮಾಡಲಾಗಿದೆ ಎಂದು ಈ ಮೂಲಗಳು ತಿಳಿಸಿದೆ. ಆದರೆ ಈ ಸೇತುವೆ ಮೇಲೆ ಒಂದು ಬಾರಿಗೆ 150 ರಿಂದ 200 ಜನರನ್ನು ಮಾತ್ರ ನಿಭಾಯಿಸಬಹುದು.

"ಈ ಸೇತುವೆಯ ಮೇಲೆ ನಡೆಯಲು ಸುಲಭಲ್ಲ. ಆದರೆ ಭಾನುವಾರವಾದ್ದರಿಂದ ಸೇತುವೆಯ ಮೇಲೆ ಭಾರಿ ಜನಸಂದಣಿ ಇತ್ತು. ಕೆಲವು ಯುವಕರು ಉದ್ದೇಶಪೂರ್ವಕವಾಗಿ ಸೇತುವೆಯನ್ನು ಅಲುಗಾಡಿಸಲು ಪ್ರಾರಂಭಿಸಿದಾಗ ನನ್ನ ಕುಟುಂಬ ಮತ್ತು ನಾನು ಸೇತುವೆಯ ಮೇಲೆ ಇದ್ದೆವು. ಅಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ ಮತ್ತು ಇದು ಅಪಾಯಕಾರಿ ಎಂದು ನನಗೆ ಅನಿಸಿದ್ದರಿಂದ ನನ್ನ ಕುಟುಂಬ ಮತ್ತು ನಾನು ಸೇತುವೆಯ ಮೇಲೆ ಸ್ವಲ್ಪ ದೂರ ಕ್ರಮಿಸಿದ ನಂತರ ವಾಪಸ್ ಬಂದೆವು" ಎಂದು ಅರ್ಧದಾರಿಯಲ್ಲೇ  ಹಿಂದಿರುಗಿದ ಅದೃಷ್ಟಶಾಲಿ ವಿಜಯ್ ಗೋಸ್ವಾಮಿ ಅವರು ಹೇಳಿದ್ದಾರೆ.

SCROLL FOR NEXT