ದೇಶ

ಕಳ್ಳತನದ ಆರೋಪ: ಇಬ್ಬರು ಬಾಲಕರ ಕಾಲನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದು ಹಲ್ಲೆ, ಮೂವರು ಶಂಕಿತರ ಬಂಧನ

Ramyashree GN

ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಗದು ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಬಾಲಕರನ್ನು ಥಳಿಸಿ ವಾಹನಕ್ಕೆ ಕಟ್ಟಿ ಎಳೆದೊಯ್ದು ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದು, ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಶನಿವಾರ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜೇಂದ್ರ ನಗರ ಪೊಲೀಸ್ ಠಾಣೆ ಪ್ರಭಾರಿ ಅಜಯ್ ಕುಮಾರ್ ಮಿಶ್ರಾ ಮಾತನಾಡಿ, ವಾಹನದಿಂದ ಹಣ ಕದ್ದ ಆರೋಪದ ಮೇಲೆ 13 ರಿಂದ 17 ವರ್ಷ ವಯಸ್ಸಿನ ಇಬ್ಬರು ಬಾಲಕರಿಗೆ ಚಿತ್ರಹಿಂಸೆ ನೀಡಿದ ಶಂಕೆಯ ಮೇಲೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಮುಖ ಆರೋಪಿ ಖಾಂಡ್ವಾ ಜಿಲ್ಲೆಯ ತರಕಾರಿ ವ್ಯಾಪಾರಿ ಘಟನೆ ನಂತರ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದರು.

ವ್ಯಾಪಾರಿಯ ಮನೆಗೆ ಬೀಗ ಹಾಕಲಾಗಿದ್ದು, ಆತನ ಕುಟುಂಬದವರೂ ನಾಪತ್ತೆಯಾಗಿದ್ದಾರೆ. ಆತನಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತೋರ್ವ ಪೊಲೀಸ್ ಅಧಿಕಾರಿ ಮಾತನಾಡಿ, 'ವ್ಯಾಪಾರಿ ಶನಿವಾರ ಈರುಳ್ಳಿ ಮೂಟೆಗಳನ್ನು ಹೊತ್ತ ಸಣ್ಣ ಸರಕು ಸಾಗಣೆ ವಾಹನದಲ್ಲಿ ಇಂದೋರ್‌ನ ದೇವಿ ಅಹಲ್ಯಾಬಾಯಿ ಹೋಳ್ಕರ್ ಹಣ್ಣು-ತರಕಾರಿ ಮಾರುಕಟ್ಟೆಗೆ ತಲುಪಿದ್ದರು. ಈವೇಳೆ ವಾಹನದಲ್ಲಿ ಇಟ್ಟಿದ್ದ ಹಣವನ್ನು ಕದ್ದ ಆರೋಪವನ್ನು ಬಾಲಕರ ಮೇಲೆ ಹೊರಿಸಲಾಗಿದೆ ಎಂದು ಹೇಳಿದರು.

ಘಟನೆಯ ವಿಡಿಯೋದಲ್ಲಿ, ಬಾಲಕರ ಕಾಲನ್ನು ವಾಹನಕ್ಕೆ ಹಗ್ಗದಿಂದ ಕಟ್ಟಿಹಾಕಿರುವುದನ್ನು ತೋರಿಸಿದೆ ಮತ್ತು ಅವಾಚ್ಯ ಪದಗಳನ್ನು ಬಳಸಿ ನಗದು ಕದ್ದಿರುವ ಪ್ರಶ್ನಿಸುತ್ತಿರುವುದನ್ನು ತೋರಿಸಿದೆ.

ವಾಹನವು ಏಕಾಏಕಿ ಸ್ಟಾರ್ಟ್ ಆಗಿದ್ದು, ಅದರೊಂದಿಗೆ ಬಾಲಕರನ್ನು ಸ್ವಲ್ಪ ದೂರ ನೆಲದ ಮೇಲೆ ಎಳೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಕೆಲವು ನೋಡುಗರು ಕಿರುಚಾಡಿ ವಾಹನ ನಿಲ್ಲಿಸಿದ್ದಾರೆ.

SCROLL FOR NEXT