ದೇಶ

'RSS ಕೆಟ್ಟ ಸಂಘಟನೆಯೇನಲ್ಲ.. ಹೀಗೆ ಎಂದು ತಿಳಿದಿದ್ದರೇ ರಾಜಕೀಯಕ್ಕೇ ಬರುತ್ತಿರಲಿಲ್ಲ': ಮಮತಾ ಬ್ಯಾನರ್ಜಿ

Srinivasamurthy VN

ಕೋಲ್ಕತಾ: ರಾಷ್ಟ್ರೀಯ ಸ್ವಯಂಸೇವಕ ಸಂಘ-(ಆರ್ ಎಸ್ಎಸ್- RSS) ಕೆಟ್ಟ ಸಂಘಟನೆ ಎಂದು ನಾನು ಭಾವಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ರಾಜ್ಯ ಪೊಲೀಸ್ ದಿನಾಚರಣೆಯ ಮುನ್ನಾದಿನದಂದು ಆಯೋಜಿಸಲಾದ ಕಾರ್ಯಕ್ರಮ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್‌ ಕೆಟ್ಟ ಸಂಘಟನೆ ಎಂದು ನಾನು ಭಾವಿಸುವುದಿಲ್ಲ. ಈಗ ಸಂಘದಲ್ಲಿಯೂ ಬಿಜೆಪಿಯವರಂತೆ ಯೋಚಿಸದ ಕೆಲವರು ಇದ್ದಾರೆ. ಒಂದಲ್ಲ ಒಂದು ದಿನ ಅವರ ಈ ತಾಳ್ಮೆ ಮುರಿಯುವುದು ಖಂಡಿತ ಎಂದು ಹೇಳಿದ್ದಾರೆ. 

'ಆರ್‌ಎಸ್‌ಎಸ್‌ನಲ್ಲಿರುವ ಎಲ್ಲರೂ ಕೆಟ್ಟವರಲ್ಲ, ಬಿಜೆಪಿಯನ್ನು ವಿರೋಧಿಸುವ ಕೆಲವರು ಒಳ್ಳೆಯವರೂ ಆಗಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಹೊರಬರುತ್ತಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಇದೇ ವೇಳೆ ಬಿಜೆಪಿ ವಿರುದ್ಧ ದೊಡ್ಡ ಮಟ್ಟದ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, 'ತೃಣಮೂಲ ಕಾಂಗ್ರೆಸ್ ಕುಟುಂಬದ (ಪಕ್ಷ) ಹೆಸರು ಕೆಡಿಸುವ ಪ್ರಯತ್ನವನ್ನು ಯಾರೂ ಮಾಡಬಾರದು, ಹಾಗೇನದರೂ ಮಾಡಿದರೆ, ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

RSS ಕೆಟ್ಟ ಸಂಘಟನೆ ಎಂದು ನಾನು ಭಾವಿಸುವುದಿಲ್ಲ. ಈಗ ಸಂಘದಲ್ಲಿಯೂ ಬಿಜೆಪಿಯವರಂತೆ ಯೋಚಿಸದ ಕೆಲವರು ಇದ್ದಾರೆ. ಒಂದಲ್ಲ ಒಂದು ದಿನ ಅವರ ಈ ತಾಳ್ಮೆ ಮುರಿಯುವುದು ಖಂಡಿತ. ಆರ್‌ಎಸ್‌ಎಸ್‌ನವರು ಕೂಡ ಶೀಘ್ರದಲ್ಲೇ ಬಿಜೆಪಿಯನ್ನು ವಿರೋಧಿಸಲಿದ್ದಾರೆ ಎಂದರು. 

ಹೀಗೆ ಎಂದು ತಿಳಿದಿದ್ದರೇ ರಾಜಕೀಯಕ್ಕೇ ಬರುತ್ತಿರಲಿಲ್ಲ
ಇದೇ ವೇಳೆ ತಮ್ಮ ರಾಜಕೀಯ ಪ್ರವೇಶ ಮಾಡಿದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ ದೀದಿ, ನಾನು ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದೆ. ಆದರೆ, ಈಗ ನನಗೆ ಅನಿಸೋದು ಏನೆಂದರೆ, ನಾನು ಬಹಳ ಹಿಂದೆಯೇ ರಾಜಕೀಯವನ್ನು ತೊರೆಯಬೇಕಿತ್ತು. ಹಾಗೇನಾದರೂ ರಾಜಕೀಯ ಇಷ್ಟು ಕೊಳಕು ಎನ್ನುವ ಸೂಚನೆ ಮೊದಲೇ ಏನಾದರೂ ಸಿಕ್ಕಿದ್ದರೆ ಖಂಡಿತಾ ಇದನ್ನು ಮಾಡಿರುತ್ತಿದ್ದೆ.  ರಾಜಕೀಯದಲ್ಲಿರುವ (Politics) ಏಕೈಕ ಕಾರಣಕ್ಕಾಗಿ ನಾನು ಹಾಗೂ ನನ್ನ ಕುಟುಂಬದವರ ಮೇಲೆ ಬಹಿರಂಗವಾಗಿಯೇ ಇಷ್ಟೆಲ್ಲಾ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಕೇಂದ್ರದ ಏಜೆನ್ಸಿಗಳು ಬರೀ ಸೇಡಿನ ರಾಜಕಾರಣದ ರೂಪವಾಗಿ ಸಮನ್ಸ್‌ ನೀಡುತ್ತಿವೆ. ರಾಜಕೀಯ ಇಷ್ಟೊಂದು ಕೊಳಕು ಆಗುತ್ತೆ ಅಂತ ಗೊತ್ತಿದ್ದಿದ್ದರೆ ನಾನೆಂದಿಗೂ ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು.

ಇದೇ ವೇಳೆ, ದನ ಮತ್ತು ಕಲ್ಲಿದ್ದಲು ಕಳ್ಳಸಾಗಣೆ ಸಮಸ್ಯೆಗಳು ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಬಿಜೆಪಿ ಆರೋಪಕ್ಕೆ ಮಮತಾ ತಿರುಗೇಟು ನೀಡಿದ್ದಾರೆ.

ಹಲವು ಭತ್ಯೆಗಳ ಘೋಷಣೆ
ರಾಜ್ಯ ಪೊಲೀಸ್ ದಿನಾಚರಣೆಯ ಮುನ್ನಾದಿನದಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವಾರು ಘೋಷಣೆಗಳನ್ನು ಮಾಡಿದ್ದು, ರಾಜ್ಯದ ಪೊಲೀಸರಿಗೆ ಉಡುಗೊರೆಯನ್ನೂ ನೀಡಿದರು. ಹಲವಾರು ವರ್ಗಗಳಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ, ಸಮವಸ್ತ್ರ ಭತ್ಯೆ, ಪರಿಹಾರ ನೇಮಕಾತಿ ಮತ್ತು ಗರಿಷ್ಠ ವಯೋಮಿತಿಯಲ್ಲಿ ಹೆಚ್ಚಳವನ್ನು ಘೋಷಿಸಲಾಗಿದೆ. ಇದರಿಂದ ಅನೇಕ ಪೊಲೀಸರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

SCROLL FOR NEXT