ದೇಶ

10 ತಿಂಗಳ ಮಗುವನ್ನು ನೆಲದ ಮೇಲೆ ಹಾಕಿ, ನೀರಿಗೆ ಧುಮುಕಿ ವ್ಯಕ್ತಿಯನ್ನು ರಕ್ಷಿಸಿದ ಮಹಿಳೆ!

Nagaraja AB

ಭೋಪಾಲ್:  ಹೆಣ್ಣು ಸಾಹಸಿ, ಧೈರ್ಯವಂತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಧ್ಯಪ್ರದೇಶದ ಕಾಲುವೆಯೊಂದರಲ್ಲಿ ಮುಳುಗುತ್ತಿದ್ದ 25 ವರ್ಷದ ವ್ಯಕ್ತಿಯೊಬ್ಬನನ್ನ ಮಹಿಳೆಯೊಬ್ಬರು ಕಾಪಾಡಿದ್ದಾರೆ. ತನ್ನ 10 ತಿಂಗಳ ಮಗುವನ್ನು ನೆಲದ ಮೇಲೆ ಇರಿಸಿ, ನೀರಿಗೆ ಹಾರಿ ಅವರನ್ನು ರಕ್ಷಿಸಿ ಮಹಿಳೆ ಸಾಹಸ ಮಾಡಿದ್ದಾರೆ. ಆದಾಗ್ಯೂ, ವ್ಯಕ್ತಿಯ ಸ್ನೇಹಿತನನ್ನು ನೀರಿನಿಂದ ಮೇಲೆತ್ತಿ ಉಳಿಸಲು ಸಾಧ್ಯವಾಗಲಿಲ್ಲ.

ಭೋಪಾಲ್ ಜಿಲ್ಲೆಯ ಕದೈಯಾಕಲಾ ಗ್ರಾಮದ ನಿವಾಸಿ 25 ವರ್ಷದ ರಾಜು ಅಹಿರ್ವಾರ್ ಮತ್ತು ಅವರ ಸ್ನೇಹಿತ ಜಿತೇಂದ್ರ ಅಹಿರ್ವಾರ್ ಅವರು ಹೊಲಕ್ಕೆ ಕೀಟನಾಶಕಗಳನ್ನು ಸಿಂಪಡಿಸಲು ನೆರೆಯ ಖಜುರಿಯಾ ಗ್ರಾಮಕ್ಕೆ ಗುರುವಾರ ತೆರಳಿದ್ದರು ಎಂದು ಸ್ಥಳೀಯ ಪೊಲೀಸ್ ಠಾಣೆ ಪ್ರಭಾರಿ ಬಿಪಿ ಸಿಂಗ್ ಹೇಳಿದ್ದಾರೆ.

ಅಂದು ಮಧ್ಯಾಹ್ನ ಧಾರಾಕಾರ ಮಳೆ ಸುರಿದು ವಾಪಸ್ಸು ಬರುವಾಗ ಎರಡು ಗ್ರಾಮಗಳನ್ನು ಬೇರ್ಪಡಿಸುವ ಕಾಲುವೆ ಉಕ್ಕಿ ಹರಿಯುತ್ತಿತ್ತು. ಕಾಲುವೆಯ ಇನ್ನೊಂದು ಬದಿಯಲ್ಲಿದ್ದ ಅವರ ಸ್ನೇಹಿತರು ನೀರನ್ನು ದಾಟದಂತೆ ಅವರಿಗೆ ಕೇಳಿಕೊಂಡರು. ಎಚ್ಚರಿಕೆಯ ಹೊರತಾಗಿಯೂ, ಇಬ್ಬರು ಪುರುಷರು ಕಾಲುವೆ ದಾಟಲು ನಿರ್ಧರಿಸಿದರು.

ಇದೆಲ್ಲವನ್ನೂ ನೋಡುತ್ತಿದ್ದ 30 ವರ್ಷದ ರಬೀನಾ, ರಾಜುಗೆ ಪರಿಚಿತರಾಗಿದ್ದು ಅವರು ಸಹ ಕಾಲುವೆ ನೀರಿಗೆ ಇಳಿಯದಂತೆ ಇಬ್ಬರಿಗೂ ಎಚ್ಚರಿಸಿದ್ದರು. ಆದಾಗ್ಯೂ ಇಬ್ಬರು ಪುರುಷರು ನಿಲ್ಲುವ ಮನಸ್ಥಿತಿಯಲ್ಲಿರಲಿಲ್ಲ.  ಕಾಲುವೆಗೆ ಕಾಲಿಟ್ಟ ಕೂಡಲೇ ವೇಗದ ಪ್ರವಾಹದಲ್ಲಿ ಸಮತೋಲನ ಕಳೆದುಕೊಂಡು ನೀರಿನಲ್ಲಿ ಮುಳುಗಲಾರಂಭಿಸಿದ್ದರು. ಈ ವೇಳೆ ರಾಜು  “ದೀದಿ, ದೀದಿ” ಎಂದು ಅಳುತ್ತಾ, ಸಹಾಯಕ್ಕಾಗಿ ಹತಾಶವಾಗಿ ರಬೀನಾರನ್ನು ಕೂಗಿದರು.  ಕೂಗು ಕೇಳಿದ ಆಕೆ ತನ್ನ 10 ತಿಂಗಳ ಮಗುವನ್ನು ನೆಲಕ್ಕೆ ಹಾಕಿ ನೀರಿಗೆ ಹಾರಿದರು. ಅವರು ರಾಜುವನ್ನು ಸುರಕ್ಷಿತವಾಗಿ ಎಳೆದುಕೊಂಡು ನಂತರ ಜಿತೇಂದ್ರನನ್ನು ಉಳಿಸಲು ಪ್ರಯತ್ನಿಸಿದಳು, ಆದರೆ ವಿಫಲವಾದರು. ಜಿಲ್ಲಾಡಳಿತದ ಮೂಲಕ ಜಿತೇಂದ್ರ ಅವರ ದೇಹವನ್ನು ಮರುದಿನ ಕಾಲುವೆಯಿಂದ ಹೊರತೆಗೆಯಲಾಯಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ರಬೀನಾ, ಅವನು ದೀದಿ ಬಚಾವೋ ಎಂದು ಕೂಗುತ್ತಿದ್ದನು. ರಾಜು ನನ್ನ ಹಳ್ಳಿಯವನು, ನನಗೆ ಅವನು ಗೊತ್ತು. ಸಹಾಯಕ್ಕಾಗಿ ಕೂಗಿದಾಗ ನಾನು ಎರಡನೇ ಬಾರಿ ಯೋಚಿಸಲೇ ಇಲ್ಲ.  ನನಗೆ ಈಜು ಗೊತ್ತಿದೆ.  ನಾನು ಅವನನ್ನು ಉಳಿಸುತ್ತೇನೆ ಎಂದು ನನಗೆ ಖಚಿತವಾಗಿತ್ತು. ಹಾಗಾಗಿ ನಾನು ಪ್ರಯತ್ನಿಸಿದೆ. ಅವರ ಸ್ನೇಹಿತನನ್ನೂ ಉಳಿಸಲು ಯತ್ನಿಸಿದೆ. ವಿಫಲವಾಯಿತು ಎಂದು ಸಾಹಸಿ ಮಹಿಳೆ ರಬೀನಾ ಹೇಳಿದರು.   ಮಹಿಳೆಯ ಸಾಹಸಕ್ಕೆ ಪೊಲೀಸರು ನಗದು ಬಹುಮಾನ ನೀಡಿದ್ದಾರೆ. ರಬೀನಾ ಅವರ ಸಹೋದರ ಪೊಲೀಸರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೂ ಬಹುಮಾನ ನೀಡಲಾಗಿದೆ.

SCROLL FOR NEXT