ದೇಶ

25 ವರ್ಷಗಳಲ್ಲಿ ಮೊದಲ ಬಾರಿಗೆ ನೀರು ಹಂಚಿಕೆ ಒಪ್ಪಂದ ಸೇರಿ ಹಲವು ಒಪ್ಪಂದಕ್ಕೆ ಭಾರತ, ಬಾಂಗ್ಲಾ ಸಹಿ

Lingaraj Badiger

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ಮಂಗಳವಾರ ಕುಶಿಯಾರಾ ನದಿಗೆ ಮಧ್ಯಂತರ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, 1996 ರಲ್ಲಿ ಗಂಗಾ ಜಲ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇದು ಮೊದಲ ಒಪ್ಪಂದವಾಗಿದೆ.

ಇದೇ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಾದೇಶಿಕ ಸಂಪರ್ಕ ಉಪಕ್ರಮ ವಿಸ್ತರಣೆ, ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಸ್ಥಾಪಿಸುವುದು, ರಕ್ಷಣಾ ಸಹಕಾರವನ್ನು ನವೀಕರಿಸುವುದು ಸೇರಿದಂತ 7 ಪ್ರಮುಖ ಒಪ್ಪಂದಗಳಿಗೆ ಭಾರತ ಹಾಗೂ ಬಾಂಗ್ಲಾದೇಶ ಸಹಿ ಹಾಕಿವೆ.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 

ಬಳಿಕ ಶೇಖ್ ಹಸೀನಾ ಅವರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕುಶಿಯಾರಾ ನದಿಯಿಂದ ನೀರು ಹಂಚಿಕೆ ಕುರಿತು ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕಿದ್ದೇವೆ. ಇದು ಭಾರತದ ದಕ್ಷಿಣ ಅಸ್ಸಾಂ ಮತ್ತು ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶಕ್ಕೆ ಪ್ರಯೋಜನವಾಗಲಿದೆ. ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ಹಾದುಹೋಗುವ ಇಂತಹ 54 ನದಿಗಳಿವೆ ಮತ್ತು ಶತಮಾನಗಳಿಂದ ಎರಡೂ ದೇಶಗಳ ಜನರ ಜೀವನೋಪಾಯಕ್ಕೆ ಸಂಬಂಧಿಸಿವೆ. ಈ ನದಿಗಳು ಜನಪದ ಕಥೆಗಳು, ಜಾನಪದ ಹಾಡುಗಳು, ನಮ್ಮ ಗಡಿ ಹಂಚಿಕೆಯ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿವೆ ಎಂದರು.

ಭಾರತ ಮತ್ತು ಬಾಂಗ್ಲಾದೇಶಗಳು 54 ನದಿಗಳನ್ನು ಹಂಚಿಕೊಂಡಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರೋಧದಿಂದಾಗಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿರುವ ತೀಸ್ತಾ ನೀರು ಹಂಚಿಕೆ ಒಪ್ಪಂದವನ್ನು ಶೀಘ್ರ ತೀರ್ಮಾನಿಸಲು ಬಯಸಿದೆ ಎಂದು ಶೇಖ್ ಹಸೀನಾ ಹೇಳಿದರು.

"ಉಭಯ ದೇಶಗಳು ಸ್ನೇಹ ಮತ್ತು ಸಹಕಾರದಿಂದ ಹಲವು ಸಮಸ್ಯೆಗಳನ್ನು ಪರಿಹರಿಸಿರುವುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ತೀಸ್ತಾ ನೀರು ಹಂಚಿಕೆ ಒಪ್ಪಂದ ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ಹಸೀನಾ ಜಂಟಿ ಮಾಧ್ಯಮ ಸಂವಾದದಲ್ಲಿ ತಿಳಿಸಿದ್ದಾರೆ.

SCROLL FOR NEXT