ಲಖನೌ: ವ್ಯಕ್ತಿಯೋರ್ವ ಗುಂಪು ಥಳಿತಕ್ಕೆ ಒಳಗಾದ ಪ್ರಕರಣದಲ್ಲಿ ಬಿಜೆಪಿ ನಾಯಕ ಆತನ ಬೆಂಬಲಿಗರು ಸೇರಿ 22 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಭಾದೋಹಿ'ಯಲ್ಲಿ ಈ ಘಟನೆ ವರದಿಯಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದ್ದು ಅಹಿತಕರ ಘಟನೆಗಳನ್ನು ತಡೆಯುವುದಕ್ಕಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಬಿಜೆಪಿ ನಾಯಕ ಹಾಗೂ ನಗರ ಪಾಲಿಕೆಯ ಅಧ್ಯಕ್ಷ ಅಶೋಕ್ ಕುಮಾರ್ ಜೈಸ್ವಾಲ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಕ್ಷುಲ್ಲಕ ವಿಚಾರಕ್ಕಾಗಿ ವಾಗ್ವಾದ ಪ್ರಾರಂಭವಾಗಿ ಅದು ಗುಂಪು ಹಲ್ಲೆಗೆ ತಿರುಗಿದೆ.
ಹೆಚ್ಚುವರಿ ಎಸ್ ಪಿ ರಾಜೇಶ್ ಭಾರ್ತಿ ಮಾತನಾಡಿ, ಮುಸ್ತಕ್ವೀಮ್ ನ ಆಡು ಪಕ್ಕದಲ್ಲಿದ್ದ ಸಂದೀಪ್ ಎಂಬುವವರ ಮನೆಗೆ ದಾರಿ ತಪ್ಪಿ ಬಂದಿದ್ದ ಹಿನ್ನೆಲೆಯಲ್ಲಿ ವಾಗ್ವಾದ ಪ್ರಾರಂಭವಾಗಿತ್ತು. ಈ ಘಟನೆ ನಡೆದ ರಾತ್ರಿ ಜೈಸ್ವಾಲ್ ಹಾಗೂ ಇತರರು ಮುಸ್ತಕ್ವೀಮ್ ಮನೆಗೆ ನುಗ್ಗಿ ಥಳಿಸತೊಡಗಿದರು ಎಂದು ಹೇಳಿದ್ದಾರೆ.
ಥಳಿತದ ತೀವ್ರತೆಗೆ ಮುಸ್ತಕ್ವೀಮ್ ತೀವ್ರವಾದ ಆಂತರಿಕ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಮುಸ್ತಕ್ವೀಮ್ ನ ಮಕ್ಕಳಾದ ಶೀಬಾ ಹಾಗೂ ಶಬ್ನಮ್ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.