ದೇಶ

ಟ್ವಿಟರ್ ಬ್ಲೂ-ಟಿಕ್ ಪ್ರಕರಣ: ಬೇಷರತ್ ಕ್ಷಮೆಯಾಚಿಸಿದ ಸಿಬಿಐ ಮಾಜಿ ನಿರ್ದೇಶಕ, ದಂಡ ಮನ್ನಾ ಮಾಡಿದ ಕೋರ್ಟ್

Ramyashree GN

ನವದೆಹಲಿ: ತಮ್ಮ ಟ್ವಿಟರ್‌ ಖಾತೆಯ ‘ಬ್ಲೂ ಟಿಕ್‌’ (ಅಧಿಕೃತ ಮುದ್ರೆ) ಮರುಸ್ಥಾಪನೆ ಕೋರಿ ಸಿಬಿಐನ ಮಾಜಿ ನಿರ್ದೇಶಕ ಎಂ. ನಾಗೇಶ್ವರ್‌ ರಾವ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸಂದರ್ಭದಲ್ಲಿ ವಿಧಿಸಿದ್ದ ₹ 25,000 ದಂಡವನ್ನು ಪಾವತಿಸದಂತೆ ದೆಹಲಿ ಹೈಕೋರ್ಟ್‌ ಇಂದು ಮನ್ನಿಸಿದೆ.

ಈ ವೇಳೆ ನಿವೃತ್ತ ಐಪಿಎಸ್ ಅಧಿಕಾರಿ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚಿಸಿದರು ಮತ್ತು ತಾನು ಪಿಂಚಣಿದಾರನಾಗಿದ್ದು, 'ತನ್ನ ಗುರುತನ್ನು ಸುರಕ್ಷಿತವಾಗಿರಿಸಲು ಕೇಳಿದ್ದೆ' ಎಂದು ಹೇಳಿದರು.

ಅವರಿಗೆ ವಿಧಿಸಿದ್ದ ದಂಡವನ್ನು ಮನ್ನಾ ಮಾಡಿದ ನ್ಯಾಯಮೂರ್ತಿ ಯಶವಂತ್ ವರ್ಮಾ, 'ಅರ್ಜಿದಾರರು ಕೇಳಿರುವ ಬೇಷರತ್ ಕ್ಷಮೆಯನ್ನು ಗಮನದಲ್ಲಿಟ್ಟುಕೊಂಡು, 2022ರ ಮೇ 17ರಂದು ನೀಡಿದ್ದ ಆದೇಶದ ಪ್ರಕಾರ ದಂಡವನ್ನು ಅಳಿಸಲಾಗುತ್ತದೆ' ಎಂದು ಆದೇಶಿಸಿದರು.

ಟ್ವಿಟರ್‌ನಲ್ಲಿನ ಅವರ ಖಾತೆಯು ಬ್ಲೂ ಟಿಕ್ ಅನ್ನು ಹೊಂದಿತ್ತು. ಆದರೆ, ಅದನ್ನು ಮಾರ್ಚ್ 2022 ರಲ್ಲಿ ತೆಗೆದುಹಾಕಲಾಗಿದೆ ಎಂದು ನಾಗೇಶ್ವರ್‌ ರಾವ್‌ ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಈ ಅರ್ಜಿಯನ್ನು ಮೇ ತಿಂಗಳಲ್ಲಿ ನ್ಯಾಯಾಲಯ ವಜಾಗೊಳಿಸಿತ್ತು.

ನಾಗೇಶ್ವರ್‌ ರಾವ್‌ ಅವರು ಏಪ್ರಿಲ್‌ 7 ರಂದು ಇದೇ ರೀತಿಯ ಅರ್ಜಿ ಸಲ್ಲಿಸಿದ್ದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಹೈಕೋರ್ಟ್‌ ಟ್ವಿಟರ್‌ ಸಂಸ್ಥೆಯನ್ನು ಸಂಪರ್ಕಿಸುವಂತೆ ಸೂಚಿಸಿತ್ತು. ಆದರೆ, ಈ ವರೆಗೆ ಟ್ವಿಟರ್‌ ಬ್ಲೂ ಟಿಕ್‌ ಸಿಕ್ಕಿಲ್ಲ ಎಂದು ಅವರು ಮರು ಅರ್ಜಿ ಸಲ್ಲಿಸಿದ್ದರು.

ಟ್ವಿಟರ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಕುಂದುಕೊರತೆಗಳು ಅಥವಾ ಬ್ಲೂಟಿಕ್‌ಗೆ ಸಂಬಂಧಿಸಿದ ದೂರುಗಳತ್ತ ಗಮನಹರಿಸಲು ಕೇಂದ್ರದ ಸಂಬಂಧಿತ ಸಚಿವಾಲಯದಲ್ಲಿ ಅಧಿಕಾರಿಗಳನ್ನು ನಿಯೋಜಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ನಾಗೇಶ್ವರ್‌ ರಾವ್ ತಮ್ಮ ಅರ್ಜಿಯಲ್ಲಿ ಕೋರಿದ್ದರು.

SCROLL FOR NEXT