ದೇಶ

ಮಿಸ್ತ್ರಿ ಸಾವು: ಕಾರು ಅಪಘಾತಕ್ಕೀಡಾಗುವ ಐದು ಸೆಕೆಂಡುಗಳ ಮೊದಲು ಬ್ರೇಕ್ ಹಾಕಲಾಗಿದೆ: ಮರ್ಸಿಡಿಸ್ ವರದಿ

Lingaraj Badiger

ಮುಂಬೈ: ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಮತ್ತು ಇತರ ಮೂವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರು ಅಪಘಾತಕ್ಕೀಡಾಗುವ ಐದು ಸೆಕೆಂಡುಗಳ ಮೊದಲು ಬ್ರೇಕ್‌ ಹಾಕಲಾಗಿದೆ ಎಂದು ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಕಂಪನಿ ಮುಂಬೈನ ಪಾಲ್ಘರ್ ಪೊಲೀಸರಿಗೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ತಿಳಿಸಿದೆ.

ಕಾರನ್ನು ಪರಿಶೀಲಿಸಲು ಮರ್ಸಿಡಿಸ್-ಬೆನ್ಜ್‌ನ ತಜ್ಞರ ತಂಡ ಹಾಂಗ್ ಕಾಂಗ್‌ನಿಂದ ಸೋಮವಾರ ಮುಂಬೈಗೆ ಭೇಟಿ ನೀಡಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಏತನ್ಮಧ್ಯೆ, ಜರ್ಮನ್ ವಾಹನ ತಯಾರಕ ಕಂಪನಿ, ಕಾರು ಅಪಘಾತದ ತನಿಖೆಯಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಗ್ರಾಹಕರ ಗೌಪ್ಯತೆಯನ್ನು ಗೌರವಿಸುವುದಕ್ಕಾಗಿ ಅವರೊಂದಿಗೆ ಮಾತ್ರ ಸಂಶೋಧನೆಯ ವಿವರ ಹಂಚಿಕೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಾನುವಾರ ಮಧ್ಯಾಹ್ನ ಪಾಲ್ಘರ್ ಜಿಲ್ಲೆಯಲ್ಲಿ ಸಂಭವಿಸಿದ ಮರ್ಸಿಡಿಸ್ ಕಾರು ಅಪಘಾತದಲ್ಲಿ ಸೈರಸ್ ಮಿಸ್ತ್ರಿ (54) ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಅವರು ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ ಮತ್ತಿಬ್ಬರು ಅನಾಹಿತಾ ಪಾಂಡೋಲೆ(55) ಹಾಗೂ ಅವರ ಪತಿ ಡೇರಿಯಸ್ ಪಾಂಡೋಲೆ (60) ಗಾಯಗೊಂಡಿದ್ದು ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೈರಸ್ ಮಿಸ್ತ್ರಿ ಅವರು ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿದ್ದಾಗ ಸೂರ್ಯ ನದಿ ಸೇತುವೆ ಮೇಲೆ ಈ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು.

SCROLL FOR NEXT