ದೇಶ

ಅಸ್ತಿತ್ವದಲ್ಲಿಲ್ಲದ 86 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಿದ ಚುನಾವಣಾ ಆಯೋಗ!

Nagaraja AB

ನವದೆಹಲಿ: ಅಸ್ತಿತ್ವದಲ್ಲಿಲ್ಲದ ನೋಂದಾಯಿತ ಮಾನ್ಯತೆ ಪಡೆಯದ 86 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗ ಮಂಗಳವಾರ ಆದೇಶಿಸಿದೆ. ಚುನಾವಣಾ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಚುನಾವಣಾ ಸಮಿತಿಯಿಂದ ಅಪಾಯದ ಸ್ಥಿತಿಯಲ್ಲಿದ್ದ ಅಂತಹ ಸಂಸ್ಥೆಗಳ ಸಂಖ್ಯೆ 537 ಕ್ಕೆ ಏರಿದೆ.  

ಸಾರ್ವಜನಿಕ ಹಿತಾಸಕ್ತಿ ಮತ್ತು ಚುನಾವಣಾ ಪ್ರಜಾಪ್ರಭುತ್ವದ ಶುದ್ಧತೆ ಗಾಗಿ ತುರ್ತಾಗಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.  ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅದು ಹೇಳಿದೆ.

ಚುನಾವಣಾ ಆಯೋಗ ಅಸ್ವಿತ್ವದಲ್ಲಿಲ್ಲದ 86 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದು ಹಾಕಿದೆ. 253 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ನಿಷ್ಕ್ರೀಯ ಎಂದು ನಿರ್ಧರಿಸಲಾಗಿದೆ. ಇದರಿಂದಾಗಿ ಮೇ 25, 2022 ರಿಂದಾಚೆಗೆ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಸಂಖ್ಯೆ 537ಕ್ಕೆ ಏರಿಕೆಯಾಗಿದೆ ಎಂದು ಆಯೋಗ ತಿಳಿಸಿದೆ. ಇದೇ ರೀತಿಯಲ್ಲಿ ಮೇ 25 ರಂದು 87 ರಾಜಕೀಯ ಪಕ್ಷಗಳು, ಜೂನ್ 20 ರಂದು 111 ರಾಜಕೀಯ ಪಕ್ಷಗಳಿಗೆ ಗೇಟ್ ಪಾಸ್ ನೀಡಲಾಗಿತ್ತು. 

ಬಿಹಾರ, ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶದ ಸಿಇಒಗಳಿಂದ ಪಡೆದ ವರದಿಗಳ ಆಧಾರದ ಮೇಲೆ 253 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 

ನೋಟಿಸ್ ಗೆ ಪ್ರತಿಕ್ರಿಯಿಸದೆ, ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದ ಹಿನ್ನೆಲೆಯಲ್ಲಿ ಅವುಗಳನ್ನು ನಿಷ್ಕ್ರೀಯ ಎಂದು ವರ್ಗೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

SCROLL FOR NEXT