ದೇಶ

'ಭಾರತ್ ಜೋಡೋ ಯಾತ್ರೆ'ಗೆ ಕೇಳಿದಷ್ಟು ಹಣ ನೀಡದ ಕೇರಳದ ತರಕಾರಿ ಅಂಗಡಿ ಮಾಲೀಕ, ಹಲ್ಲೆ: ಮೂವರು ಕಾಂಗ್ರೆಸ್ ಕಾರ್ಯಕರ್ತರ ವಜಾ

Sumana Upadhyaya

ಕೊಲ್ಲಮ್ (ಕೇರಳ): ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ 8ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ. ಕೇರಳದ ಕೊಲ್ಲಂನಲ್ಲಿ ಪಕ್ಷದ ಮೆರವಣಿಗೆಗೆ ತರಕಾರಿ ಅಂಗಡಿ ಮಾಲೀಕರಿಂದ ಕಾಂಗ್ರೆಸ್ ಕಾರ್ಯಕರ್ತರು ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, 'ಸಾಕಷ್ಟು' ಹಣ ನೀಡದ್ದಕ್ಕಾಗಿ ಅವರ ಅಂಗಡಿಗಳನ್ನು ದೋಚುವ ವೀಡಿಯೊಗಳು ಹೊರಬಂದಿದ್ದು ಸಾಕಷ್ಟು ಸದ್ದು ಮಾಡುತ್ತಿವೆ.

ಇದರಿಂದ ಕಾಂಗ್ರೆಸ್ ಗೂಂಡಾಗಿರಿ ಆರೋಪದ ಟೀಕೆಗಳು ಬರುತ್ತಿವೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ ಇಂತಹ ವರ್ತನೆಯನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದು ಮೂವರು ಕಾರ್ಯಕರ್ತರನ್ನು ಅಮಾನತು ಮಾಡಿದೆ.ಇಂತಹ ವರ್ತನೆ ಕಾಂಗ್ರೆಸ್ ಸಿದ್ಧಾಂತವಲ್ಲ, ಕಾರ್ಯಕರ್ತರ ಇಂತಹ ವರ್ತನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಟ್ವೀಟ್ ಮಾಡಿದ್ದಾರೆ.

ವಿಡಿಯೊದಲ್ಲಿ ಕಾರ್ಯಕರ್ತರ ಒಂದು ಗುಂಪು ತರಕಾರಿ ಮಾರಾಟಗಾರರೊಂದಿಗೆ ವಾಗ್ವಾದದಲ್ಲಿ ತೊಡಗಿದ್ದಾರೆ. ಕೆಲವರು 'ಭಾರತ್ ಜೋಡೋ ಯಾತ್ರೆ'ಯ ಪೋಸ್ಟರ್‌ಗಳನ್ನು ಹೊತ್ತಿದ್ದಾರೆ. ಅಂಗಡಿ ಮಾಲೀಕನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅವರಲ್ಲಿ ಒಬ್ಬರು ತರಕಾರಿಗಳನ್ನು ಎಸೆದು ಅಂಗಡಿಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಿರುವುದು ಕಂಡು ಬಂತು. ತರಕಾರಿ ಅಂಗಡಿ ಮಾಲೀಕ ಭಾರತ್ ಜೋಡೋ ಯಾತ್ರೆಗೆ 500 ರೂಪಾಯಿ ಕೊಟ್ಟಿದ್ದು, ಕಾರ್ಯಕರ್ತರು 2 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಹಲ್ಲೆ ಮಾಡಿದವರ ಗುಂಪಿನಲ್ಲಿ ಐವರಿದ್ದು ಅದರಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್ ಅನೀಶ್ ಖಾನ್ ಇದ್ದಾರೆ. ತರಕಾರಿ ಅಂಗಡಿ ಮಾಲೀಕ ಎಸ್ ಫವಾಸ್ ಕುನ್ನಿಕೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ಹಲವು ವರ್ಷಗಳಿಂದ ಹಣ ಸಂಗ್ರಹ ಮಾಡುತ್ತಿದೆ. ಆದರೆ ಈ ಘಟನೆ ನಡೆಯಬಾರದಿತ್ತು. ಹಲ್ಲೆ ನಡೆಸಿದವರು ನಿಜಕ್ಕೂ ಪಕ್ಷಕ್ಕೆ ಕಪ್ಪು ಚುಕ್ಕೆಯಾಗಿದ್ದು ಪ್ರದೇಶ ಕಾಂಗ್ರೆಸ್ ಅವರ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 150 ದಿನಗಳ ಸುದೀರ್ಘ 3,500 ಕಿಮೀ ಪಾದಯಾತ್ರೆಯನ್ನು ಸೆಪ್ಟೆಂಬರ್ 7 ರಂದು ನೆರೆಯ ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲಾಯಿತು. ಇದು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಯಾತ್ರೆಯು ಮುಂದಿನ 18 ದಿನಗಳ ಕಾಲ ಕೇರಳದ ಮೂಲಕ ಸಂಚರಿಸಲಿದ್ದು, ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. 21 ದಿನಗಳ ಕಾಲ ಕರ್ನಾಟಕದಲ್ಲಿದೆ. ಪ್ರತಿದಿನ 25 ಕಿ ಲೋ ಮೀಟರ್ ಸಾಗುವ ಯಾತ್ರೆ ಇದಾಗಿದೆ.

SCROLL FOR NEXT