ದೇಶ

ದೆಹಲಿ ವಕ್ಫ್ ಬೋರ್ಡ್ ನೇಮಕಾತಿ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಖಾನ್ 4 ದಿನ ಎಸಿಬಿ ವಶಕ್ಕೆ

Lingaraj Badiger

ನವದೆಹಲಿ: ದೆಹಲಿ ವಕ್ಫ್‌ ಬೋರ್ಡ್‌ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಅವರನ್ನು ನಾಲ್ಕು ದಿನಗಳ ಕಾಲ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ವಶಕ್ಕೆ ನೀಡಿ ದೆಹಲಿ ಕೋರ್ಟ್ ಶನಿವಾರ ಆದೇಶಿಸಿದೆ.

ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಲ್ಲಿಸಿದ ಮನವಿಯ ಮೇರೆಗೆ ಆರೋಪಿ ಶಾಸಕರನ್ನು ನಾಲ್ಕು ದಿನ ಎಸಿಬಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ನೇಮಕಾತಿ ವೇಳೆ ಖಾನ್ ಅವರ ಐದು ಸಂಬಂಧಿಕರನ್ನು ಮಂಡಳಿಯಲ್ಲಿ ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ ಮತ್ತು 22 ಜನರನ್ನು ಅವರು ಪ್ರತಿನಿಧಿಸುವ ಓಖ್ಲಾ ಕ್ಷೇತ್ರದಿಂದ ನೇಮಕ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಖಾನ್ ಅವರನ್ನು 14 ದಿನಗಳ ಕಾಲ ನಮ್ಮ ವಶಕ್ಕೆ ನೀಡುವಂತೆ ಎಸಿಬಿ ಮನವಿ ಮಾಡಿತ್ತು. ಆದರೆ ಕೋರ್ಟ್ ಆರೋಪಿಯನ್ನು ನಾಲ್ಕು ದಿನ ಮಾತ್ರ ಎಸಿಬಿ ವಶಕ್ಕೆ ನೀಡಿದೆ.

2020ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಳಗ್ಗೆ ಓಖ್ಲಾ ಶಾಸಕ ಅಮಾನತುಲ್ಲಾ ಖಾನ್ ರನ್ನು ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆ ಬೆನ್ನಲ್ಲೇ ಖಾನ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ದಾಳಿ ವೇಳೆ 12 ಲಕ್ಷ ರೂ. ನಗದು ಮತ್ತು ಪರವಾನಗಿ ಇಲ್ಲದ ಗನ್, ಕೆಲವು ಕಾಟ್ರಿಡ್ಜ್‌ಗಳನ್ನು ಜಪ್ತಿ ಮಾಡಲಾಗಿತ್ತು.

SCROLL FOR NEXT