ದೇಶ

ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋ ರೆಕಾರ್ಡ್: ತನಿಖೆಗಾಗಿ ಪಂಜಾಬ್ ಪೊಲೀಸರಿಂದ 3 ಮಹಿಳಾ ಸದಸ್ಯರ ಎಸ್‌ಐಟಿ ರಚನೆ

Ramyashree GN

ಚಂಡೀಗಢ: ಚಂಡೀಗಢ ವಿಶ್ವವಿದ್ಯಾನಿಲಯದ ಹಲವಾರು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳು ರೆಕಾರ್ಡ್ ಮಾಡಿದ್ದಾಳೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಮೂವರು ಮಹಿಳಾ ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಗುರುಪ್ರೀತ್ ಕೌರ್ ದೇವ್ ಅವರ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ರಚಿಸಲಾಗಿದೆ. ತಂಡವು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಿದೆ ಮತ್ತು ಇದರಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯನ್ನು ಬಿಡುವುದಿಲ್ಲ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.

ತನಿಖೆಗಳು ಭರದಿಂದ ಸಾಗುತ್ತಿವೆ. ಈ ಸಂಬಂಧ ವಿದ್ಯಾರ್ಥಿನಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪರಿಶೀಲಿಸದ ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ. ಸಮಾಜದಲ್ಲಿ ಶಾಂತಿ ನೆಲೆಸಲು ಒಗ್ಗಟ್ಟಿನಿಂದ ಶ್ರಮಿಸೋಣ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಡಿಜಿಪಿ ಮನವಿ ಮಾಡಿದ್ದಾರೆ.

ಹಲವಾರು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಪಂಜಾಬ್‌ನ ಮೊಹಾಲಿಯಲ್ಲಿ ಶನಿವಾರ ರಾತ್ರಿಯಿಂದ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ನಡೆದಿದ್ದು, ಸೋಮವಾರ ಮುಂಜಾನೆಯವರೆಗೂ ಪ್ರತಿಭಟನೆಗಳು ಮುಂದುವರೆದಿದ್ದವು.

SCROLL FOR NEXT