ದೇಶ

ಹಿಜಾಬ್ ಪರ ವಿದ್ಯಾರ್ಥಿಗಳು ಪಿಎಫ್ ಐ ಹೇಳಿದಂತೆ ವರ್ತಿಸುತ್ತಿದ್ದಾರೆ: ಸುಪ್ರೀಂಗೆ ರಾಜ್ಯ ಸರ್ಕಾರ

Lingaraj Badiger

ನವದೆಹಲಿ: 2021ರ ತನಕ ಯಾವುದೇ ಹೆಣ್ಣುಮಕ್ಕಳು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿರಲಿಲ್ಲ ಎಂದು ಪ್ರತಿಪಾದಿಸಿರುವ ಕರ್ನಾಟಕ ಸರ್ಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಆರಂಭಿಸಿದ ಸಾಮಾಜಿಕ ಮಾಧ್ಯಮ ಆಂದೋಲನದಿಂದ ಈ ವಿವಾದ ಸೃಷ್ಟಿಯಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹಿಜಾಬ್ ನಿಷೇಧವನ್ನು ಸಮರ್ಥಿಸಿಕೊಂಡಿದೆ.

ಇಂಧು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್(ಎಸ್‌ಜಿ) ತುಷಾರ್ ಮೆಹ್ತಾ ಅವರು, ಧಾರ್ಮಿಕ ಆಂದೋಲನ ಸೃಷ್ಟಿಸಲು ಈ ವಿವಾದ ಹುಟ್ಟು ಹಾಕಲಾಗಿದೆ. ಇದು ವಿದ್ಯಾರ್ಥಿಗಳ ಸ್ವಯಂಪ್ರೇರಿತ ಕೃತ್ಯವಲ್ಲ ಎಂದು ಹೇಳಿದರು.

ಹಿಜಾಬ್ ಪ್ರತಿಭಟನೆ ದೊಡ್ಡ ಪಿತೂರಿಯ ಭಾಗವಾಗಿದೆ ಮತ್ತು ವಿದ್ಯಾರ್ಥಿಗಳು ಪಿಎಫ್ಐ ಸಲಹೆಯಂತೆ ವರ್ತಿಸುತ್ತಿದ್ದಾರೆ. ಈ ಪ್ರತಿಭಟನೆಯ ಹಿಂದೆ ಪಿಎಫ್ಐ ಪಾತ್ರ ಇದೆ ಎಂದು ತುಷಾರ್ ಮೆಹ್ತಾ ಕೋರ್ಟ್ ಗೆ ತಿಳಿಸಿದರು.

ನ್ಯಾಯಾಲಯಕ್ಕೆ ಸಲ್ಲಿಸಿದ ಪೊಲೀಸ್ ದಾಖಲೆಗಳ ಪ್ರಕಾರ ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬ ವಾದಗಳನ್ನು ಒಪ್ಪಿಕೊಂಡಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಮೆಹ್ತಾ ಉಲ್ಲೇಖಿಸಿದರು.

 ಹಿಜಾಬ್ ಇಸ್ಲಾಂನ ಕಡ್ಡಾಯ ಭಾಗವಲ್ಲ. ಅದನ್ನು ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಿಲ್ಲ.  ಅದನ್ನು ಧರಿಸದಿದ್ದರೆ ಧರ್ಮದಿಂದ ಹೊರಹಾಕುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠಕ್ಕೆ ಮೆಹ್ತಾ ತಿಳಿಸಿದರು.

ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದುವರಿಸಿದೆ.

SCROLL FOR NEXT