ದೇಶ

ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ: ದೇಶಾದ್ಯಂತ ಪಕ್ಷದ ಕಾರ್ಯಕರ್ತರಿಂದ ನನಗೆ ಬೆಂಬಲ ಇದೆ ಎಂದ ಶಶಿ ತರೂರು

Nagaraja AB

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹೋರಾಟ ನಡೆಸಲು ತನಗೆ ದೇಶಾದ್ಯಂತ ಪಕ್ಷದ ಕಾರ್ಯಕರ್ತರ ಬೆಂಬಲವಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರು ಸೋಮವಾರ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪರ್ಧೆ ಅನಿಶ್ಚಿತತೆಯ ನಡುವೆ ಶಶಿ ತರೂರು ಈ ರೀತಿಯ ಹೇಳಿಕೆ ನೀಡಿದ್ದಾರೆ.

ನಾಮಪತ್ರ ಸಲ್ಲಿಸಿದಾಗ ನನಗೆ ಸಿಗುವ ಬೆಂಬಲವನ್ನು ನೀವು ನೋಡುತ್ತೀರಿ. ಪ್ರಮುಖ ರಾಜ್ಯಗಳ ಪಕ್ಷದ ಕಾರ್ಯಕರ್ತರಿಂದ ಬೆಂಬಲ ಪಡೆದು ಕಣಕ್ಕಿಳಿಯುತ್ತೇನೆ. ಎಐಸಿಸಿ ಮುಖ್ಯಸ್ಥನ ಸ್ಥಾನಕ್ಕೆ ಸ್ಪರ್ಧಿಸುವಂತೆ ದೇಶದ ವಿವಿಧ ಕಡೆಗಳಿಂದ ಅನೇಕ ಜನರು ಮನವಿ ಮಾಡುತ್ತಿದ್ದಾರೆ ಎಂದು ಶಶಿ ತರೂರು ಸುದ್ದಿಗಾರರಿಗೆ ತಿಳಿಸಿದರು.  

ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಆಸಕ್ತಿಯಿದೆ ಆದರೆ, ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಸೆಪ್ಟೆಂಬರ್ 30 ರಂದು ಎಲ್ಲದ್ದಕ್ಕೂ ಸ್ಪಷ್ಟತೆ ಸಿಗಲಿದೆ ಎಂದು ಅವರು ಹೇಳಿದರು.  

ನಾಮಪತ್ರ ಪಡೆದಿದ್ದೇನೆ. ಜನರೊಂದಿಗೆ ಸಭೆ ನಡೆಸಿ, ಅವರೊಂದಿಗೆ ಮಾತನಾಡುತ್ತಿದ್ದೇನೆ. ಈ ಸಂಬಂಧ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೂ ಚರ್ಚೆ ನಡೆಸಿದ್ದೇನೆ. ಅವರು ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ನೇರವಾಗಿ ತಮಗೆ ತಿಳಿಸಿರುವುದಾಗಿ ಶಶಿ ತರೂರು ತಿಳಿಸಿದರು. ಕಳೆದ ಸೋಮವಾರ ಸೋನಿಯಾ ಗಾಂಧಿ ಅವರನ್ನು ಶಶಿ ತರೂರು ಭೇಟಿಯಾಗಿದ್ದರು. ಚುನಾವಣೆ ವಿಚಾರದಲ್ಲಿ ಸೋನಿಯಾ ಗಾಂಧಿ ತಟಸ್ಥರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

SCROLL FOR NEXT