ದೇಶ

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ: ಸೆಪ್ಟೆಂಬರ್ 30ರಂದು ಶಶಿ ತರೂರ್ ನಾಮಪತ್ರ ಸಲ್ಲಿಕೆ; ಪ್ರತಿಸ್ಪರ್ಧಿ ಯಾರು?

Lingaraj Badiger

ನವದೆಹಲಿ: ರಾಜಸ್ತಾನ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪರ 90ಕ್ಕೂ ಹೆಚ್ಚು ಶಾಸಕರು ಬಂಡಾಯವೆದ್ದ ಬಳಿಕ ಎಐಸಿಸಿ ಅಧ್ಯಕ್ಷರ ಚುನಾವಣೆ ರೇಸ್ ನಿಂದ ಅವರು ಹೊರಗುಳಿದಿದ್ದಾರೆ. ಈಗ ಕಾಂಗ್ರೆಸ್ ಅಧ್ಯಕ್ಷರ ಚುನಾವಣಾ ಕಣದಲ್ಲಿರುವ ಶಶಿ ತರೂರ್ ಅವರನ್ನು ಯಾರು ಎದುರಿಸಬಹುದು ಎಂಬ ಸಸ್ಪೆನ್ಸ್ ನಡುವೆ ಮತ್ತೊಂದು ಬೆಳವಣಿಗೆ ನಡೆದಿದೆ.

ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಇಂದು ಎಐಸಿಸಿ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಅವರಿಗೆ ಮತ್ತೊಂದು ನಾಮಪತ್ರ ನೀಡಿದ್ದಾರೆ. 

ಈ ಮಧ್ಯೆ ಸೆಪ್ಟೆಂಬರ್ 30 ರಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಾಗಿ ಶಶಿ ತರೂರ್ ಅವರ ಪ್ರತಿನಿಧಿಯೊಬ್ಬರು ತಮ್ಮ ಕಚೇರಿಗೆ ತಿಳಿಸಿದ್ದಾರೆ ಎಂದು ಮಿಸ್ತ್ರಿ ಹೇಳಿದ್ದಾರೆ.

ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಸ್ತ್ರಿ, ಇಂದು ದೆಹಲಿಯ 10 ಜನಪಥ್ ನಿವಾಸದಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮತದಾರರ ಗುರುತಿನ ಚೀಟಿಯನ್ನು ಹಸ್ತಾಂತರಿಸಿದ್ದೇನೆ ಎಂದರು. ಅಲ್ಲದೆ ಇದುವರೆಗೆ ಎಷ್ಟು ಜನ ನಾಮಪತ್ರಗಳನ್ನು ಪಡೆದಿದ್ದಾರೆ ಮತ್ತು ಪ್ರತಿನಿಧಿಗಳ ಬಗ್ಗೆ ಅವರು ಸೋನಿಯಾ ಗಾಂಧಿಯವರಿಗೆ ವಿವರಿಸಿದ್ದಾರೆ.

ಪವನ್ ಕುಮಾರ್ ಬನ್ಸಾಲ್ ಅವರು ಸೋಮವಾರ ತಮ್ಮ ಕಚೇರಿಯಿಂದ ನಾಮನಿರ್ದೇಶನ ಫಾರ್ಮ್‌ಗಳನ್ನು ಪಡೆದುಕೊಂಡಿದ್ದಾರೆ ಮತ್ತು ಅದನ್ನು ಬೆರೆಯವರಿಗಾಗಿ ಪಡೆದಿರಬಹುದು. ಅವರು ಯಾರಿಗಾಗಿ ಪಡೆದಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ಪ್ರತಿನಿಧಿಗಳು ಯಾರಿಗಾಗಿ ಫಾರ್ಮ್‌ಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಲ್ಲ ಎಂದಿದ್ದಾರೆ.

ಪಕ್ಷವು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಅಕ್ಟೋಬರ್ 1, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಅಕ್ಟೋಬರ್ 8 ರಂದು ಸಂಜೆ 5 ಗಂಟೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಅಗತ್ಯ ಬಿದ್ದರೆ ಅಕ್ಟೋಬರ್ 17 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ ಎಂದಿದ್ದಾರೆ.

SCROLL FOR NEXT