ದೇಶ

ವಿಜಯ ದಶಮಿಯಂದು ತೆಲಂಗಾಣ ಸಿಎಂ ಕೆಸಿಆರ್ ರಿಂದ ರಾಷ್ಟ್ರೀಯ ಪಕ್ಷ ಘೋಷಣೆ

Lingaraj Badiger

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ಅಕ್ಟೋಬರ್ 5 ರಂದು ವಿಜಯ ದಶಮಿ ದಿನದಂದು ತಮ್ಮ ರಾಷ್ಟ್ರೀಯ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ.

ಟಿಆರ್‌ಎಸ್ ಶಾಸಕಾಂಗ ಪಕ್ಷವು ಅಕ್ಟೋಬರ್ 5 ರಂದು ಬೆಳಗ್ಗೆ 11 ಗಂಟೆಗೆ ಕೆಸಿಆರ್‌ಗೆ ರಾಷ್ಟ್ರೀಯ ಪಕ್ಷವನ್ನು ಘೋಷಿಸುವಂತೆ ಮನವಿ ಮಾಡುವ ಸರ್ವಾನುಮತದ ನಿರ್ಣಯ ಅಂಗೀಕರಿಸುವ ನಿರೀಕ್ಷೆಯಿದೆ. ನಂತರ, ಟಿಆರ್‌ಎಸ್ ರಾಜ್ಯ ಕಾರ್ಯಕಾರಿಣಿ ಸಭೆ ಸಹ ಅಂದು ಮಧ್ಯಾಹ್ನ 12 ಗಂಟೆಗೆ ರಾಷ್ಟ್ರೀಯ ಪಕ್ಷ ಉದ್ಘಾಟಿಸುವಂತೆ ಸಿಆರ್‌ಗೆ ಮನವಿ ಮಾಡುವ ಮತ್ತೊಂದು ನಿರ್ಣಯ ಅಂಗೀಕರಿಸಲಿದೆ.

ಚಂದ್ರಶೇಖರ್ ರಾವ್ ಅವರು ಅಕ್ಟೋಬರ್ 5 ರಂದು ಮಧ್ಯಾಹ್ನ 1 ಗಂಟೆಗೆ ತೆಲಂಗಾಣ ಭವನದಲ್ಲಿ ರಾಷ್ಟ್ರೀಯ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ. ಆದಾಗ್ಯೂ, ಕೆಸಿಆರ್ ಅವರು ರಾಷ್ಟ್ರೀಯ ಪಕ್ಷ ಘೋಷಿಸುವ ಬಗ್ಗೆ ಪಕ್ಷದಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. 

ಕೆಸಿಆರ್ ಅವರು ತಮ್ಮ ರಾಷ್ಟ್ರೀಯ ಪಕ್ಷಕ್ಕೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ನಾಮಕರಣ ಮಾಡುವ ಸಾಧ್ಯತೆ ಇದ್ದು, ಅಕ್ಟೋಬರ್ 5 ರಂದು ಹೊಸ ಪಕ್ಷಕ್ಕೆ ರಾಷ್ಟ್ರೀಯ ಸಂಯೋಜಕರನ್ನು ಘೋಷಿಸುವ ನಿರೀಕ್ಷೆಯಿದೆ. 

ಕೆಸಿಆರ್ ಅವರು ಅಕ್ಟೋಬರ್ ಎರಡನೇ ವಾರದಲ್ಲಿ ದೆಹಲಿಯಲ್ಲಿ ಸಾರ್ವಜನಿಕ ಸಭೆಯನ್ನು ಕರೆಯುವ ನಿರೀಕ್ಷೆಯಿದೆ.

ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ಕೆಸಿಆರ್ ಅವರ ಜೊತೆ ಕೆಲಸ ಮುಂದುವರಿಸಲಿದೆ.

SCROLL FOR NEXT