ನವದೆಹಲಿ: ಏ.೦6 ರಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇದೇ ವೇಳೆ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದು, ದೇಶಾದ್ಯಂತ ಲಕ್ಷಾಂತರ ಗೋಡೆಗಳ ಮೇಲೆ ಪ್ರಧಾನಿ ಮೋದಿ ಅವರ ಪುನರಾಯ್ಕೆ ಸಂದೇಶವನ್ನು ಬರೆಯುವ ಯೋಜನೆ ಹೊಂದಿದ್ದು, ಈ ಅಭಿಯಾನಕ್ಕೆ ನಾಳೆ ಚಾಲನೆ ಸಿಗಲಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಪತ್ರಕರ್ತರೊಂದಿಗೆ ಮಾತನಾಡಿದ್ದು, ಏಕ್ ಬಾರ್ ಫಿರ್ ಸೇ ಮೋದಿ ಸರ್ಕಾರ್ ಹಾಗೂ ಏಕ್ ಫಾರ್ ಫಿರ್ ಸೇ ಭಾಜಪ ಸರ್ಕಾರ್ ಎಂಬ ಘೋಷ ವಾಕ್ಯಗಳನ್ನು ಮಧ್ಯಾಹ್ನ 12 ರ ನಂತರ ಜೆಪಿ ನಡ್ಡಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ 10.72 ಲಕ್ಷ ಗೋಡೆಗಳ ಮೇಲೆ ಬರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪಕ್ಷದ ಸಂಸ್ಥಾಪನಾ ದಿನದಿಂದ ಆರಂಭಗೊಂಡು ಏ.14, ಅಂದರೆ ಅಂಬೇಡ್ಕರ್ ಅವರ ಜನ್ಮದಿನಾಚರಣೆಯವರೆಗೆ ಸಾಮಾಜಿಕ ನ್ಯಾಯ ಸಪ್ತಾಹ ಕಾರ್ಯಕ್ರಮವನ್ನು ಪಕ್ಷದಿಂದ ಆಯೋಜಿಸಲಾಗಿದೆ ಎಂದು ತರುಣ್ ಚುಗ್ ಹೇಳಿದ್ದಾರೆ.
ಈ ಅವಧಿಯಲ್ಲಿ ಬಿಜೆಪಿ ದೇಶಾದ್ಯಂತ ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ತರುಣ್ ಚುಗ್ ತಿಳಿಸಿದ್ದಾರೆ.
ಜ್ಯೋತಿಬಾ ಫುಲೆ ಅವರ ಜನ್ಮದಿಚಾರಣೆಯ ಅಂಗವಾಗಿ ಏ.11 ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರ ಬಡವರಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಹಾಗೂ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿರುವ ಅಂಶಗಳ ಕುರಿತು ಮಾತನಾಡಲಿದ್ದು 10 ಲಕ್ಷ ಕ್ಕೂ ಅಧಿಕ ಪ್ರದೇಶಗಳಲ್ಲಿ ನೇರ ಪ್ರಸಾರವಾಗಲಿದೆ. 1980 ರಲ್ಲಿ ಭಾರತೀಯ ಜನಸಂಘದ ನಾಯಕರು ಬಿಜೆಪಿ ಪಕ್ಷವನ್ನು ಸ್ಥಾಪಿಸಿದ್ದರು.