ದೇಶ

ಆದಿವಾಸಿ ಮಧು ಹತ್ಯೆ: 13 ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೇರಳ ಕೋರ್ಟ್

Lingaraj Badiger

ಪಾಲಕ್ಕಾಡ್: ಆಹಾರ ಸಾಮಗ್ರಿ ಕದ್ದಿದ್ದಾನೆ ಎಂದು ಆರೋಪಿಸಿ ಕೇರಳದ ಆದಿವಾಸಿ ಮಧು ಎಂಬಾತನನ್ನು ಹೊಡೆದು ಸಾಯಿಸಿದ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು ಎಂದು ಘೋಷಿಸಿದ್ದ ಕೇರಳ ಕೋರ್ಟ್, 13 ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶಿಸಿದೆ.

27 ವರ್ಷದ ಆದಿವಾಸಿ ಯುವಕನನ್ನು ಅಮಾನವೀಯವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಮನ್ನಾರ್ಕಾಡ್‌ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ಪಿಒಎ) ವಿಶೇಷ ನ್ಯಾಯಾಲಯ, 14 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.

ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶ ಕೆ.ಎಂ. ರತೀಶ್ ಕುಮಾರ್ ಅವರು, 13 ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಮತ್ತೊಬ್ಬ ಅಪರಾಧಿ ಮುನೀರ್ ಗೆ 500 ರೂಪಾಯಿ ದಂಡ ವಿಧಿಸಿದೆ. ಮುನೀರ್ ಗೆ ಈ ಮೊದಲು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಮತ್ತು ದೀರ್ಘಕಾಲದವರೆಗೆ ಜೈಲಿನಲ್ಲಿ ಇದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 352 ರ ಅಡಿಯಲ್ಲಿ ಮಾತ್ರ ಆರೋಪ ಹೊರಿಸಲಾಗಿತ್ತು.

ಪಾಲಕ್ಕಾಡಿನ ಅಟ್ಟಪ್ಪಾಡಿಯ ಚಿಂದುಕೂರಿನ ಮಧು ಅವರನ್ನು ಫೆಬ್ರವರಿ 22, 2018ರಂದು ಅಂಗಡಿಯೊಂದರಲ್ಲಿ ಕೆಲವು ಆಹಾರ ಸಾಮಾಗ್ರಿ ಕದ್ದಿದ್ದಾನೆ ಎಂದು ಆರೋಪಿಸಿ ಗುಂಪೊಂದು ಹತ್ಯೆ ಮಾಡಿತ್ತು.

SCROLL FOR NEXT