ಥಾಣೆ: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸರು ಮರಾಠಿ ರ‍್ಯಾಪರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಹಾಡಿನಲ್ಲಿ ಪನ್ನಾಸ್ ಖೋಕೆ(ಐವತ್ತು ಪೆಟ್ಟಿಗೆಗಳು) ಮತ್ತು ಚೋರ್(ಕಳ್ಳರು) ಎಂಬ ಪದಗಳನ್ನು ಬಳಸಿದ ಔರಂಗಾಬಾದ್ ಮೂಲದ ರ‍್ಯಾಪರ್ ರಾಜ್ ಮುಂಗಸೆ ಅವರ ವಿರುದ್ಧ ಶಿವಸೇನೆ ಕಾರ್ಯಕರ್ತ ಅಂಬರನಾಥ್ ಅವರು ದೂರು ನೀಡಿದ್ದು, ದೂರಿನ ಆಧಾರದಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಇದನ್ನು ಓದಿ: ಉದ್ಧವ್ ಠಾಕ್ರೆ ಸರ್ಕಾರ ಉರುಳಿಸಲು ಶಿಂಧೆ- ಫಡ್ನವೀಸ್ 150 ಬಾರಿ ಸಭೆ: ಮಹಾರಾಷ್ಟ್ರ ಸಚಿವ ತಾನಾಜಿ ಸಾವಂತ್
ಮುಂಗಸೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 501(ಮಾನನಷ್ಟ), 504 (ಶಾಂತಿ ಭಂಗಕ್ಕೆ ಪ್ರಚೋದಿಸುವುದು, ಉದ್ದೇಶಪೂರ್ವಕ ಅವಮಾನ) ಮತ್ತು 505(2) (ವರ್ಗಗಳ ನಡುವೆ ದ್ವೇಷ ಸೃಷ್ಟಿಸುವ ಹೇಳಿಕೆ) ಅಡಿಯಲ್ಲಿ ಮಂಗಳವಾರ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ಪ್ರಕರಣ ಸಂಬಂಧ ಇದುವರೆಗೂ ಯಾವುದೇ ಬಂಧನವಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಉದ್ಧವ್ ಠಾಕ್ರೆಗೆ ನಿಷ್ಠರಾಗಿರುವ ನಾಯಕರು ಕಳೆದ ವರ್ಷ ಬಂಡಾಯವೆದ್ದು ಠಾಕ್ರೆ ಸರ್ಕಾರವನ್ನು ಉರುಳಿಸಿದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರನ್ನು ಚೋರ್ ಎಂದು ಕರೆದಿದ್ದದರು ಮತ್ತು ಪಕ್ಷಗಳನ್ನು ಬದಲಾಯಿಸಲು ಖೋಕ್ ಅಥವಾ ಹಣದ ಪೆಟ್ಟಿಗೆ ಪಡೆದಿದ್ದಾರೆ ಎಂದು ಆರೋಪಿಸಿದ್ದರು.