ದೇಶ

ದೇಶದಾದ್ಯಂತ ಹನುಮ ಜಯಂತಿ ಸಂಭ್ರಮ: ರಾಮನವಮಿ ಘರ್ಷಣೆ ಬೆನ್ನಲ್ಲೇ ಅಹಿತಕರ ಘಟನೆಗಳು ನಡೆಯದಂತೆ ದೆಹಲಿ ಸೇರಿ ಹಲವೆಡೆ ಬಿಗಿ ಭದ್ರತೆ!

Manjula VN

ನವದೆಹಲಿ: ದೇಶದಾದ್ಯಂತ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಮನವಮಿ ಸಂದರ್ಭದಲ್ಲಿ ಘರ್ಷಣೆಗಳು ಸಂಭವಿಸಿದ ಹಿನ್ನೆಲೆಯಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಂತೆ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.

ದೆಹಲಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ವಿಶೇಷವಾಗಿ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕಳೆದ ವರ್ಷದ ಗಲಭೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ. ವಾಯುವ್ಯ ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮ ಜಯಂತಿ ಆಚರಣೆಯನ್ನು ಮಾಡಲು ಸಂಘಟಕರು ಸಿದ್ದತೆ ನಡೆಸಿದ್ದಾರೆ. ಹನುಮಾನ್ ಶೋಭಾಯಾತ್ರೆಗೆ ಅನುಮತಿ ಕೋರಿ ಪೊಲೀಸರು ಈಗಾಗಲೇ ಅರ್ಜಿ ಸಲ್ಲಿಸಿದ್ದು, ಕಳೆದ ವರ್ಷದ ಕೋಮುಗಲಭೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಅನುಮತಿ ನಿರಾಕರಿಸಿದ್ದಾರೆದು ವರದಿಗಳು ತಿಳಿಸಿವೆ.

ದೆಹಲಿಯ ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೀಪೇಂದ್ರ ಪಾಠಕ್ ಅವರು ಮಾತನಾಡಿ, ಜಹಾಂಗೀರಪುರಿಯಲ್ಲಿ ಹನುಮಾನ್ ಜಯಂತಿ ಆಚರಣೆಯ ಆಯೋಜಕರೊಂದಿಗೆ ಸಂಪರ್ಕದಲ್ಲಿರಲಾಗಿದೆ. ಆಚರಣೆಗಳಿಗೆ ಯಾವುದೇ ರೀತಿಯ ಅಡ್ಡಿಯಾಗದಂತೆ ಸುರಕ್ಷತೆಯನ್ನು ಖಚಿತಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಹನುಮ ಜಯಂತಿಯಂದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.

ಕಳೆದ ವರ್ಷ ಏಪ್ರಿಲ್ 16 ರಂದು ಜಹಾಂಗೀರಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಎಂಟು ಪೊಲೀಸರು ಗಾಯಗೊಂಡಿದ್ದರು. ಘಟನೆ ವೇಳೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವಂತಹ ಹಿಂಸಾತ್ಮಕ ಘಟನೆಗಳೂ ನಡೆದಿದ್ದವು.

ಇದರಂತೆ ಕಳೆದ ವಾರ ರಾಮನವಮಿ ಆಚರಣೆ ವೇಳೆಯೂ ಇದೇ ರೀತಿಯ ಕೋಮು ಘರ್ಷಣೆ ನಡೆದಿತ್ತು. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳ ಹಲವು ಭಾಗಗಳಲ್ಲಿ ಕೋಮು ಘರ್ಷಣೆಗಳು ನಡೆದಿದ್ದವು.

SCROLL FOR NEXT