ದೇಶ

ಮತ್ತೆ ಕೊರೋನಾ ಹೆಚ್ಚಳ: ಎಚ್ಚರಿಕೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

Lingaraj Badiger

ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ರಾಜ್ಯ ಸರ್ಕಾರಗಳು ಕೋವಿಡ್ ಸೂಕ್ತ ನಿರ್ವಹಣೆಗೆ ಸಿದ್ಧರಾಗಬೇಕು ಮತ್ತು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
  
ವರ್ಚುವಲ್ ಮೂಲಕ ರಾಜ್ಯ ಆರೋಗ್ಯ ಸಚಿವರು ಮತ್ತು ಪ್ರಧಾನ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗಿನ ಸಭೆ ನಡೆಸಿದ ಮಾಂಡವಿಯಾ ಅವರು, ಐಎಲ್‌ಐ ಮತ್ತು ತೀವ್ರತರವಾದ ಉಸಿರಾಟದ ಸೋಂಕಿನ (ಎಸ್‌ಎಆರ್‌ಐ) ಪ್ರಕರಣಗಳ ಮೇಲ್ವಿಚಾರಣೆ ಮಾಡುವ ಮೂಲಕ ತುರ್ತು ಹಾಟ್‌ಸ್ಪಾಟ್‌ಗಳನ್ನು ಗುರುತಿಸಬೇಕು. ಕೋವಿಡ್ ಪರೀಕ್ಷೆ ಮತ್ತು ಲಸಿಕೆ ನೀಡುವುದನ್ನು ಹೆಚ್ಚಿಸುವಂತೆ ಹಾಗೂ ಆಸ್ಪತ್ರೆಯ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಈ ಹಿಂದೆ ಕೋವಿಡ್ ಉಲ್ಬಣದ ಸಮಯದಲ್ಲಿ ಮಾಡಿದಂತೆ ಕೇಂದ್ರ ಮತ್ತು ರಾಜ್ಯಗಳು ಸಹಕಾರ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ ಎಂದು ಮಾಂಡವಿಯಾ ಹೇಳಿದರು.

ಏಪ್ರಿಲ್ 10 ಮತ್ತು 11 ರಂದು ಎಲ್ಲಾ ಆಸ್ಪತ್ರೆಗಳ ಮೂಲಸೌಕರ್ಯಗಳ ಕುರಿತು ಅಣಕು ಪ್ರದರ್ಶನ  ನಡೆಸಬೇಕು ಮತ್ತು ಏಪ್ರಿಲ್ 8 ಮತ್ತು 9 ರಂದು ಜಿಲ್ಲಾಡಳಿತ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಆರೋಗ್ಯ ಸಿದ್ಧತೆಯನ್ನು ಪರಿಶೀಲಿಸಬೇಕು ಎಂದು ಅವರು ರಾಜ್ಯಗಳ ಆರೋಗ್ಯ ಸಚಿವರಿಗೆ ಸೂಚಿಸಿದರು.

SCROLL FOR NEXT