ದೇಶ

ಈಸ್ಟರ್ ಹಿನ್ನೆಲೆ: ದೆಹಲಿಯ ಚರ್ಚ್ ನಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ! 

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಈಸ್ಟರ್ ಅಂಗವಾಗಿ ನವದೆಹಲಿಯಲ್ಲಿನ ಸೇಕ್ರೆಡ್ ಹಾರ್ಡ್ ಕ್ಯಾಥಡ್ರಲ್ ಚರ್ಚ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. 

ಚರ್ಚ್ ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುತ್ತಿರುವ ಹಾಗೂ ಪ್ರಧಾನಿ ಮೋದಿ ಅಲ್ಲಿನ ಪಾದ್ರಿಗಳಿಗೆ ಶುಭಾಶಯ ಕೋರುತ್ತಿರುವ ವೀಡಿಯೋ ಅಧಿಕೃತವಾಗಿ ಪ್ರಕಟಗೊಂಡಿದೆ. ಪ್ರಧಾನಿ ಮೋದಿ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಆವರಣದಲ್ಲಿ ಗಿಡ ನೆಟ್ಟಿದ್ದು ವಿಶೇಷವಾಗಿತ್ತು. 

ಇಂದು, ಈಸ್ಟರ್‌ನ ವಿಶೇಷ ಸಂದರ್ಭದಲ್ಲಿ, ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ನಾನು ಕ್ರಿಶ್ಚಿಯನ್ ಸಮುದಾಯದ ಆಧ್ಯಾತ್ಮಿಕ ನಾಯಕರನ್ನು ಸಹ ಭೇಟಿಯಾದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕ್ರೈಸ್ತರನ್ನು ಸಕ್ರಿಯವಾಗಿ ಓಲೈಸುತ್ತಿರುವುದರಿಂದ ಪ್ರಧಾನಮಂತ್ರಿ ಚರ್ಚ್‌ ಗೆ ಅಪರೂಪದ ಭೇಟಿ  ನೀಡಿರುವುದು ರಾಜಕೀಯ ಪ್ರಾಮುಖ್ಯತೆ ಪಡೆದಿದೆ. 

ಮೋದಿಯವರು ತಮ್ಮ ಇತ್ತೀಚಿನ ಭಾಷಣಗಳಲ್ಲಿ ಗೋವಾ ಮತ್ತು 2 ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಪಕ್ಷದ ಚುನಾವಣಾ ಯಶಸ್ಸನ್ನು ಉಲ್ಲೇಖಿಸುವ ಮೂಲಕ ಬಿಜೆಪಿಯೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಬೆಳೆಯುತ್ತಿರುವ ಸಂಪರ್ಕವನ್ನು ಒತ್ತಿಹೇಳಿದ್ದಾರೆ. ಈ ರಾಜ್ಯಗಳು ಹೆಚ್ಚಿನ ಕ್ರಿಶ್ಚಿಯನ್ ಜನಸಂಖ್ಯೆಯನ್ನು ಹೊಂದಿವೆ.

ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಅಭಿವೃದ್ಧಿ ಎಂಬ ಧ್ಯೇಯೋದ್ದೇಶಗಳಿಗೆ ತಮ್ಮ ಸರ್ಕಾರದ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ. 

ಇನ್ನು ಈ ಸಮುದಾಯ ಗಣನೀಯವಾಗಿ ಇರುವ ಕೇರಳದಂತಹ ರಾಜ್ಯದಲ್ಲಿ ಬಿಜೆಪಿ ಸಮುದಾಯದ ಬೆಂಬಲದ ನಿರೀಕ್ಷೆಯಲ್ಲಿದ್ದು ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ, ಕ್ರಿಶ್ಚಿಯನ್, ಅನಿಲ್ ಆಂಟೋನಿ ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ್ದಾರೆ.

SCROLL FOR NEXT