ದೇಶ

ಮಹಾರಾಷ್ಟ್ರದ ಅಕೋಲಾ ದೇವಸ್ಥಾನದ ಟಿನ್ ಶೆಡ್ ಮೇಲೆ ಬೃಹತ್ ಮರ ಬಿದ್ದು 7 ಮಂದಿ ಸಾವು, 23 ಜನರಿಗೆ ಗಾಯ

Sumana Upadhyaya

ಅಕೋಲಾ(ಮಹಾರಾಷ್ಟ್ರ): ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮತ್ತು ಮಳೆಯಿಂದಾಗಿ ದೇವಸ್ಥಾನದ ಆವರಣದಲ್ಲಿ ಜನರು ನಿಂತಿದ್ದ ಟಿನ್ ಶೆಡ್‌ನ ಮೇಲೆ ಮರವೊಂದು ಬಿದ್ದು ಏಳು ಜನರು ಮೃತಪಟ್ಟು 23 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. 

ನಿನ್ನೆ ಭಾನುವಾರ ಸಂಜೆ 7.30ರ ಸುಮಾರಿಗೆ ಬಾಲಾಪುರ ತಾಲೂಕಿನ ಪಾರಸ್‌ ಗ್ರಾಮದ ಬಾಬುಜಿ ಮಹಾರಾಜರ ದೇವಸ್ಥಾನದಲ್ಲಿ ಮಹಾ ಆರತಿಗೆ ಜನರು ಸೇರಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅಕೋಲಾ ಜಿಲ್ಲಾಧಿಕಾರಿ ನಿಮಾ ಅರೋರಾ ತಿಳಿಸಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಲಿದೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ಸರ್ಕಾರದ ನಿಯಮಗಳ ಪ್ರಕಾರ ಆರ್ಥಿಕ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಗಾಳಿ ಮತ್ತು ಮಳೆಯಿಂದಾಗಿ 100 ವರ್ಷ ಹಳೆಯದಾದ ಮರವೊಂದು ಟಿನ್ ಶೆಡ್‌ನ ಮೇಲೆ ಬಿದ್ದಿದ್ದು, ಅದರ ಅಡಿಯಲ್ಲಿ ಸುಮಾರು 40 ಜನರು ನಿಂತಿದ್ದರು. ಮೃತಪಟ್ಟವರಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳೆಯರಾಗಿದ್ದಾರೆ. 23 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಐವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 

ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಾಯಾಳುಗಳನ್ನು ಅಕೋಲಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಘಟನೆಯಲ್ಲಿ ಸಾವನ್ನಪ್ಪಿದ ಇಬ್ಬರು ಮಹಿಳೆಯರು 50 ಮತ್ತು 55 ವರ್ಷ ವಯಸ್ಸಿನವರಾಗಿದ್ದು, ಜಲಗಾಂವ್ ಮತ್ತು ಬುಲ್ಧಾ ಮೂಲದವರಾಗಿದ್ದಾರೆ. ಮೃತ ಐವರಲ್ಲಿ 55 ವರ್ಷ ವಯಸ್ಸಿನ ಇಬ್ಬರು ಮತ್ತು 35 ವರ್ಷದ ಒಬ್ಬರು ಅಕೋಲಾ ನಿವಾಸಿಗಳು. ಇನ್ನಿಬ್ಬರು ವ್ಯಕ್ತಿಗಳ ಗುರುತು ಸಿಗಬೇಕಿದೆ ಎಂದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿವೆ.

ಉಪ ಮುಖ್ಯಮಂತ್ರಿ ಫಡ್ನವೀಸ್ ಅವರು ಟ್ವೀಟ್‌ನಲ್ಲಿ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದ ಕಡೆಯಿಂದ ಹಾಗೂ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ನೀಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. 

SCROLL FOR NEXT