ದೇಶ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ: 8 ಹಾಲಿ ಶಾಸಕರಿಗೆ ಖೋಕ್, 52 ಹೊಸ ಅಭ್ಯರ್ಥಿಗಳಿಕೆ ಟಿಕೆಟ್!

Srinivas Rao BV

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ 8 ಹಾಲಿ ಶಾಸಕರಿಗೆ ಖೋಕ್ ನೀಡಿದೆ. 

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ 52 ಹೊಸ ಮುಖಗಳಿಗೆ ಟಿಕೆಟ್ ಘೋಷಿಸಲಾಗಿದೆ. ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರಾದ ಡಿ.ಕೆ ಶಿವಕುಮಾರ್ (ಕನಕಪುರ) ಹಾಗೂ ಸಿದ್ದರಾಮಯ್ಯ (ವರುಣಾ) ವಿರುದ್ಧ ಬಿಜೆಪಿ ಅನುಕ್ರಮವಾಗಿ ಆರ್ ಅಶೋಕ್ ಹಾಗೂ ವಿ ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿದೆ. 

ಸಚಿವ ಅಂಗಾರ (ಸುಳ್ಯ) ಸೇರಿದಂತೆ 8 ಮಂದಿ ಶಾಸಕರಿಗೆ ಈ ಬಾರಿ ಟಿಕೆಟ್ ತಪ್ಪಿದೆ. ಸೋಮಣ್ಣ (ವರುಣಾ ಹಾಗೂ ಚಾಮರಾಜನಗರ) ಹಾಗೂ ಅಶೋಕ್ (ಪದ್ಮನಾಭನಗರ, ಕನಕಪುರ) ಇಬ್ಬರೂ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ.

ಮಾಜಿ ಸಚಿವ ಸಿಪಿ ಯೋಗೇಶ್ವರ್ ಮತ್ತೊಮ್ಮೆ ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಚನ್ನಪಟ್ಟಣದಿಂದ ಕಣಕ್ಕಿಳಿದಿದ್ದಾರೆ. ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ನಿರ್ಣಾಯಕವಾಗಿದ್ದು ಅದೇ ಸಮುದಾಯದ ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಲಾಗಿದೆ ಇನ್ನು ಒಕ್ಕಲಿಗರ ಪ್ರಾಬಲ್ಯವಿರುವ ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಮತ್ತೋರ್ವ ಒಕ್ಕಲಿಗ ನಾಯಕ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಲಾಗಿದೆ.

ಸಿಎಂ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಹಾಗೂ ಶಿಕಾರಿಪುರದಿಂದ ಯಡಿಯೂರಪ್ಪ ಬದಲು ಅವರ ಪುತ್ರ ಬಿವೈ ವಿಜಯೇಂದ್ರಗೆ ಟಿಕೆಟ್ ಘೋಷಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ, 9 ವೈದ್ಯರಿಗೆ, ನಿವೃತ್ತ ಐಎಸ್ಎಸ್, ಐಪಿಎಸ್ ಗಳಿಗೆ ಟಿಕೆಟ್ ನೀಡಲಾಗಿದೆ. 32 ಒಬಿಸಿ ಅಭ್ಯರ್ಥಿಗಳಿಗೆ 16 ಟಿಕೆಟ್ ನೀಡಲಾಗಿದೆ ಎಂದು ಹೇಳಿದರು. ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗೆ ಟಿಕೆಟ್ ಘೋಷಿಸಲಾಗಿದೆ.

ಮೊದಲ ಪಟ್ಟಿಯಲ್ಲಿ 9 ವೈದ್ಯರು, 5 ಅಡ್ವೊಕೇಟ್ ಗಳು, ಓರ್ವ ನಿವೃತ್ತ ಐಎಎಸ್ ಅಧಿಕಾರಿ ಓರ್ವ ನಿವೃತ್ತ ಐಪಿಎಸ್ ಅಧಿಕಾರಿ, ಮೂವರು ನಿವೃತ್ತ ಸರ್ಕಾರಿ ಉದ್ಯೋಗಿಗಳು, 8 ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್ ಘೋಷಿಸಲಾಗಿದೆ. 

SCROLL FOR NEXT