ದೇಶ

ಎಲ್ಲ ಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುತ್ತೇವೆ: ನಿತೀಶ್, ತೇಜಸ್ವಿ ಭೇಟಿ ಬಳಿಕ ರಾಹುಲ್ ಗಾಂಧಿ

Lingaraj Badiger

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಎಲ್ಲಾ ಪ್ರತಿಪಕ್ಷಗಳನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುವುದಾಗಿ ವಾಗ್ದಾನ ಮಾಡಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿನ ಮಾತುಕತೆಯ ನಡುವೆಯೇ ಮಹಾಘಟಬಂಧನ ನಾಯಕರಾದ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರು ಇಂದು ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ಇದು 'ಐತಿಹಾಸಿಕ ಸಭೆ' ಎಂದು ಬಣ್ಣಿಸಿದರು. ಮುಂಬರುವ ಚುನಾವಣೆಗಾಗಿ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

ನಂತರ ಮಾತನಾಡಿದ ರಾಹುಲ್ ಗಾಂಧಿ, ವಿರೋಧ ಪಕ್ಷಗಳನ್ನು ಒಂದುಗೂಡಿಸಲು 'ಐತಿಹಾಸಿಕ ಹೆಜ್ಜೆ' ತೆಗೆದುಕೊಳ್ಳಲಾಗಿದೆ. ಇದು ಒಂದು ಪ್ರಕ್ರಿಯೆ, ದೇಶಕ್ಕಾಗಿ ವಿರೋಧ ಪಕ್ಷದ ದೃಷ್ಟಿಕೋನವನ್ನು ಇದು ರೂಪಿಸುತ್ತದೆ" ಎಂದು ಹೇಳಿದರು.

ಈ ಸೈದ್ಧಾಂತಿಕ ಹೋರಾಟದಲ್ಲಿ ಎಲ್ಲ ಪ್ರತಿ ಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುತ್ತೇವೆ. ಕೇಂದ್ರೀಯ ಸಂಸ್ಥೆಗಳ ಮೇಲಿನ ದಾಳಿಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಇನ್ನು ಸಾಧ್ಯವಾದಷ್ಟು ಎಲ್ಲಾ ಪ್ರತಿ ಪಕ್ಷಗಳನ್ನು ಒಗ್ಗೂಡಿಸುವುದು ಮತ್ತು ಜತೆಗೆ ಕೆಲಸ ಮಾಡುವ ಪ್ರಯತ್ನವಾಗಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

SCROLL FOR NEXT