ದೇಶ

ಗುಂಡಿನ ದಾಳಿಗೆ ಸಾಯುವುದಕ್ಕೆ ಮೊದಲು ಅತೀಕ್ ಅಹ್ಮದ್ ಹೇಳಿದ ಕೊನೆಯ ಹೆಸರು ಗುಡ್ಡು ಮುಸ್ಲಿಂ ಯಾರು, ಪೊಲೀಸರ ತನಿಖೆ: ಉ.ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ

Sumana Upadhyaya

ಪ್ರಯಾಗ್ ರಾಜ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಕೊನೆಯ ಬಾರಿಗೆ ಹೇಳಿದ ಶಬ್ದ ಗುಡ್ಡು ಮುಸ್ಲಿಂ. ಹಾಗಾದರೆ ಈ ಗುಡ್ಡು ಮುಸ್ಲಿಂ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಮಾಧ್ಯಮಗಳು ಹಾಗೂ ಪೊಲೀಸರ ಎದುರೇ ದುಷ್ಕರ್ಮಿಗಳು ಕಳೆದ ರಾತ್ರಿ ಪ್ರಯಾಗ್ ರಾಜ್ ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅತೀಕ್ ಅಹ್ಮದ್ ಮತ್ತು ಆತನ ಸೋದರನ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿರುವ ದೃಶ್ಯ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಎದೆನಡುಗಿಸುವಂತಿದೆ.

ಕಳೆದ ಫೆಬ್ರವರಿಯಲ್ಲಿ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಹೆಚ್ಚು ಚರ್ಚೆಯಾದ ಹೆಸರು ಗುಡ್ಡು ಮುಸ್ಲಿಂ. ಉಮೇಶ್ ಪಾಲ್ ಮೇಲೆ ಹಲವು ಬಾರಿ ಬಾಂಬ್‌ಗಳನ್ನು ಎಸೆದ ಆರೋಪಿ ಆತ ಎಂದು ಹೇಳಲಾಗುತ್ತಿದ್ದು, ಆತನನ್ನು ಗುಡ್ಡು 'ಬಾಂಬಾಜ್' ಎಂದೂ ಕರೆಯುತ್ತಾರೆ.

ಇದೀಗ ಪೊಲೀಸರು ಗುಡ್ಡು ಮುಸ್ಲಿಂನನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಗುಡ್ಡು ಮುಸ್ಲಿಂನನ್ನು ಬಲ್ಲವರು ಹೇಳುವಂತೆ ಆತ ಮಹಾ ಅಪರಾಧಿ. ಅಲಹಾಬಾದ್ ನಲ್ಲಿ ಜನಿಸಿ, ಅಲ್ಲಿಯೇ ಶಾಲೆಯಲ್ಲಿ ಓದುತ್ತಿದ್ದಾಗಲೇ ಕ್ರಿಮಿನಲ್ ಆಗಿದ್ದವ. ನಂತರ ಅನುಭವಿ ಕುಖ್ಯಾತ ಅಪರಾಧಿಗಳ ಸಂಪರ್ಕಕ್ಕೆ ಬಂದಿದ್ದ. ಕಂಟ್ರಿ ಬಾಂಬ್ ತಯಾರಿಸುವುದನ್ನು ಕಲಿತು ಅದರಲ್ಲಿ ಪರಿಣಿತನಾಗಿದ್ದ. ಅವನ ಪೋಷಕರು ಅವನನ್ನು ಸರಿಯಾದ ದಾರಿಯಲ್ಲಿ ತರಲು ಪ್ರಯತ್ನಿಸಿ ಅವನನ್ನು ಅಧ್ಯಯನಕ್ಕಾಗಿ ಲಕ್ನೋಗೆ ಕಳುಹಿಸಿದರು. ಆದರೂ ತನ್ನ ಬುದ್ದಿ ಚಾಳಿ ಬಿಟ್ಟಿರಲಿಲ್ಲ. 

ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ನನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ: ಅತಿಕ್ ಅಹ್ಮದ್‌ ಭದ್ರತೆ ಹೊಣೆ ಹೊತ್ತಿದ್ದ 17 ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ಅತಿಕ್‌ ಶೂಟೌಟ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ. ಇಂದು ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲೂ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಉತ್ತರ ಪ್ರದೇಶದಾದ್ಯಂತ ಇಂದು ಭದ್ರತೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಇಂದು ಹತ್ಯೆ ನಡೆದ ಪ್ರಯಾಗ್ ರಾಜ್ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಏರ್ಪಡಿಸಿದ್ದಾರೆ.

SCROLL FOR NEXT