ದೇಶ

ಭ್ರಷ್ಟಾಚಾರ ಆರೋಪ: ಅಣ್ಣಾಮಲೈಗೆ 500 ಕೋಟಿ ರೂ. ಲೀಗಲ್ ನೋಟಿಸ್ ನೀಡಿದ ಡಿಎಂಕೆ

Lingaraj Badiger

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಅದರ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧದ ಭ್ರಷ್ಟಾಚಾರ ಆರೋಪ ಮಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ 500 ಕೋಟಿ ರೂಪಾಯಿ ಲೀಗಲ್ ನೋಟಿಸ್ ಜಾರಿಗೊಳಿಸಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಅವರ ಪರವಾಗಿ ನೀಡಲಾದ 10 ಪುಟಗಳ ಲೀಗಲ್ ನೋಟಿಸ್‌ನಲ್ಲಿ ಅಣ್ಣಾಮಲೈ ಅವರ ‘ಡಿಎಂಕೆ ಫೈಲ್ಸ್’ ಎಂಬ ಹೆಸರಿನಲ್ಲಿ, ಸ್ಟಾಲಿನ್ ಮತ್ತು ಇತರ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು “ಸುಳ್ಳು, ಆಧಾರರಹಿತ, ಮಾನಹಾನಿಕರ ಆರೋಪ ಮಾಡಿದ್ದಾರೆ” ಎಂದು ಹೇಳಿದೆ.

ಅಣ್ಣಾಮಲೈ ಅವರು ಸ್ಟಾಲಿನ್ ವಿರುದ್ಧ 200 ಕೋಟಿ ರೂ. ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಆದರೆ "ಡಿಎಂಕೆ ಅಧ್ಯಕ್ಷರು ತಮ್ಮ 56 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಯಾವುದೇ ವ್ಯಕ್ತಿಯಿಂದ ಒಂದು ಪೈಸೆ ಅಕ್ರಮವಾಗಿ ಪಡೆದಿಲ್ಲ" ಎಂದು ನೋಟಿಸ್ ಮೂಲಕ ತಿರುಗೇಟು ನೀಡಲಾಗಿದೆ.

ಅಣ್ಣಾಮಲೈ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಸ್ಟಾಲಿನ್ ಪರವಾಗಿ ಒತ್ತಾಯಿಸಿರುವ ಭಾರತಿ ಅವರು, ಸಾಮಾಜಿಕ ಮಾಧ್ಯಮ ಮತ್ತು ವೆಬ್‌ಸೈಟ್‌ನಿಂದ ಆರೋಪಗಳನ್ನು ಒಳಗೊಂಡ "ಆಕ್ಷೇಪಾರ್ಹ" ವೀಡಿಯೊಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಿದ್ದಾರೆ.

SCROLL FOR NEXT