ದೇಶ

ಏಷ್ಯಾದಲ್ಲಿ ಹೆಚ್ಚಿದ ತಾಪಮಾನ, ಭಾರತದಲ್ಲೂ ಬಿಸಿ ಗಾಳಿಯ ಎಚ್ಚರಿಕೆ

Lingaraj Badiger

ನವದೆಹಲಿ: ಭಾರತದಿಂದ ದಕ್ಷಿಣ ಚೀನಾ, ಥೈಲ್ಯಾಂಡ್‌ವರೆಗೆ, ಈ ವರ್ಷ ಏಷ್ಯಾದ ಹಲವು ದೇಶಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.

ಸೋಮವಾರ, ಭಾರತದ ಪ್ರಯಾಗರಾಜ್ ನಲ್ಲಿ ತಾಪಮಾನ 44.6 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ. ಬಾಂಗ್ಲಾದೇಶದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಶಾಖದ ತೀವ್ರತೆ ಇನ್ನೂ ಕೆಟ್ಟದಾಗಿರುತ್ತದೆ" ಎಂದು ಹವಾಮಾನಶಾಸ್ತ್ರಜ್ಞ ಮತ್ತು ಹವಾಮಾನ ಇತಿಹಾಸಕಾರ ಮ್ಯಾಕ್ಸಿಮಿಲಿಯಾನೊ ಹೆರೆರಾ ಅವರು ಎಚ್ಚರಿಸಿದ್ದಾರೆ.

ಈ ಅಸಾಧಾರಣ ತಾಪಮಾನವನ್ನು "ಏಷ್ಯನ್ ಇತಿಹಾಸದಲ್ಲಿ ಕೆಟ್ಟ ಏಪ್ರಿಲ್ ಹೀಟ್ ವೇವ್" ಎಂದು ಮ್ಯಾಕ್ಸಿಮಿಲಿಯಾನೋ ಹೆರೆರಾ ಅವರು ಹೇಳಿರವುದಾಗಿ ಗಾರ್ಡಿಯನ್ ವರದಿ ಮಾಡಿದೆ.

ಉತ್ತರ ಮತ್ತು ಪೂರ್ವ ಭಾರತದ ಆರು ನಗರಗಳಲ್ಲಿ 44 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ಶುಕ್ರವಾರದವರೆಗೆ ಈ ಬಿಸಿಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ದಿ ಗಾರ್ಡಿಯನ್ ವರದಿ ತಿಳಿಸಿದೆ.

ಹವಾಮಾನ ಬಿಕ್ಕಟ್ಟಿನ ಮುಂಚೂಣಿ ದೇಶವಾದ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶನಿವಾರ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿತ್ತು. ಇದು 58 ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ. 

ಸಿಎನ್ಎನ್ ಸಹ ಥೈಲ್ಯಾಂಡ್‌ನ ಹವಾಮಾನದ ಬಗ್ಗೆ ಹೆರೆರಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದು, ವಾರಾಂತ್ಯದಲ್ಲಿ, ಥೈಲ್ಯಾಂಡ್ ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT