ಉದ್ಯಾನನಗರಿ ಬೆಂಗಳೂರಿನಲ್ಲಿ 36 ಡಿಗ್ರಿ, ಕಲಬುರಗಿಯಲ್ಲಿ 41 ಡಿಗ್ರಿ ತಾಪಮಾನ; ಬೇಸಿಗೆ ಧಗೆಗೆ ರಾಜ್ಯದ ಜನ ತತ್ತರ!

ರಾಜ್ಯದಲ್ಲಿ ಬೇಸಿಗೆ ಅಬ್ಬರ ಜೋರಾಗಿದ್ದು, ಬಿಸಿಲ ಧಗೆಗೆ ಅಕ್ಷರಶಃ ಕರ್ನಾಟಕದ ಜನತೆ ತತ್ತರಿಸಿ ಹೋಗಿದೆ.
ಬೇಸಿಗೆ ಕರ್ನಾಟಕ
ಬೇಸಿಗೆ ಕರ್ನಾಟಕ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಅಬ್ಬರ ಜೋರಾಗಿದ್ದು, ಬಿಸಿಲ ಧಗೆಗೆ ಅಕ್ಷರಶಃ ಕರ್ನಾಟಕದ ಜನತೆ ತತ್ತರಿಸಿ ಹೋಗಿದೆ.

ಹೌದು.. ಹಾಲಿ ವರ್ಷ ಬೇಸಿಗೆ ಅಬ್ಬರ ಜೋರಾಗಿದ್ದು, ಬಿಸಿಲಿನ ಅಬ್ಬರ ಹೇಗಿದೆ ಎಂದರೆ ಜನರು ಅಕ್ಷರಶಃ ಬೆಂದು ಹೋಗುತ್ತಿದ್ದಾರೆ. ಈಗಿನ ಸ್ಥಿತಿ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ವಿವಿಧ ಜಿಲ್ಲಿಗೆಳಲ್ಲಿ ದಾಖಲೆಯ ತಾಪಮಾನ ದಾಖಲಾಗಿದ್ದು, ಬೆಂಗಳೂರು ನಗರದಲ್ಲಿ ಗುರುವಾರ ಈ ವರ್ಷದ ಗರಿಷ್ಠ ತಾಪಮಾನ 36.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶುಕ್ರವಾರದ ತಾಪಮಾನವು ಇದಕ್ಕಿಂತ ಕೇವಲ 0.4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದ್ದು, ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಮತ್ತೊಂದೆಡೆ ಕಲಬುರಗಿಯಲ್ಲಿ ಗರಿಷ್ಠ 41.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಇದು ರಾಜ್ಯದಲ್ಲಿ ಇದುವರೆಗೆ ದಾಖಲಾದ ಗರಿಷ್ಠ ತಾಪಮಾನವಾಗಿದೆ. ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗಿದ್ದರೂ, ಮುಂದಿನ ಕೆಲವು ದಿನಗಳವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವುದಿಲ್ಲ ಎಂದು IMD ಮುನ್ಸೂಚನೆ ನೀಡಿದೆ.

ಕಳೆದ ವರ್ಷ ಏಪ್ರಿಲ್ ಮಧ್ಯದಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ವರ್ಷ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಎರಡು ವಾರಗಳಿಗಿಂತ ಹೆಚ್ಚು ಕಾಲ ಮಳೆಯಾಗಿಲ್ಲ. ಇದು ಸಾಕಷ್ಟು ತೇವಾಂಶ, ಸಾಕಷ್ಟು ತಾಪನ, ಗಾಳಿಯ ಅಸ್ಥಿರತೆಯಂತಹ ಯಾವುದೇ ಪ್ರಚೋದಕ ಕಾರ್ಯವಿಧಾನದ ಅನುಪಸ್ಥಿತಿಯಿಂದಾಗಿ ತಾಪಮಾನ ಹೆಚ್ಚಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

"ಉತ್ತರ ಕರ್ನಾಟಕದ ಕೆಲವು ಭಾಗಗಳು ಗಾಳಿಯ ಸ್ಥಗಿತ ಮತ್ತು ಸ್ಥಳೀಯ ಸಂವಹನದಿಂದಾಗಿ ಮೋಡ ಕವಿದ ಕಾರಣ ಮಳೆಯನ್ನು ಅನುಭವಿಸುತ್ತಿವೆ. ಆದರೆ ಬೆಂಗಳೂರಿನ ವಿಷಯದಲ್ಲಿ ಸಾಪೇಕ್ಷ ಆರ್ದ್ರತೆ ಮತ್ತು ತೇವಾಂಶ ಇಲ್ಲ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಏರಿಕೆಯಾಗಲಿದೆ. ಕೆಲವು ದಿನಗಳ ಕಾಲ ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ತಾಪಮಾನವು ಕಡಿಮೆಯಾದರೆ, ಅದು ಮತ್ತೆ ಗಗನಕ್ಕೇರಲು ಪ್ರಾರಂಭಿಸುತ್ತದೆ ಮತ್ತು 45-46 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುವ ಸಾದ್ಯತೆ ಇದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಉಷ್ಣ ಅಲೆಯು ಹೆಚ್ಚಾಗಲಿದೆ. ಏಪ್ರಿಲ್ ಬೇಸಿಗೆಯ ಗರಿಷ್ಠ ತಾಪಮಾನದ ತಿಂಗಳಾಗಿದ್ದು, ಈ ವರ್ಷ ಮೇ ತಿಂಗಳಲ್ಲಿ ಗುಡುಗು ಸಹಿತ ಮಳೆಯನ್ನು ನಿರೀಕ್ಷಿಸಲಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬೇಸಿಗೆಯ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಚು ತಾಪಮಾನ?
ಕರ್ನಾಟಕದ ಜಿಲ್ಲೆಗಳ ಪೈಕಿ ಕಲಬುರಗಿಯಲ್ಲೇ ಗರಿಷ್ಠ ತಾಪಮಾನ ದಾಖಲಾಗಿದ್ದು, 41 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಉಷ್ಣಾಂಶ ದಾಖಲಾಗುತ್ತಿದೆ. ಮಾಮೂಲಿಗಿಂತ 2 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 36 ಡಿಗ್ರಿ, ಮಂಗಳೂರಲ್ಲಿ ಗರಿಷ್ಠ 34 ಡಿಗ್ರಿ, ಶಿವಮೊಗ್ಗದಲ್ಲಿ ಗರಿಷ್ಠ 39 ಡಿಗ್ರಿ, ಬೆಳಗಾವಿ ಜಿಲ್ಲೆಯಲ್ಲಿ ಗರಿಷ್ಠ 37 ಡಿಗ್ರಿ, ಮೈಸೂರು ಗರಿಷ್ಠ 37, ಮಂಡ್ಯದಲ್ಲಿ ಗರಿಷ್ಠ 38, ಮಡಿಕೇರಿಯಲ್ಲಿ ಗರಿಷ್ಠ 33, ರಾಮನಗರದಲ್ಲಿ ಗರಿಷ್ಠ 36, ಹಾಸನದಲ್ಲಿ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಠ 37 ಡಿಗ್ರಿ, ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ 36 ಡಿಗ್ರಿ, ಕೋಲಾರದಲ್ಲಿ ಗರಿಷ್ಠ 36, ತುಮಕೂರು ಜಿಲ್ಲೆಯಲ್ಲಿ ಗರಿಷ್ಠ 37, ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 34, ಕಾರವಾರದಲ್ಲಿ ಗರಿಷ್ಠ 33, ಚಿಕ್ಕಮಗಳೂರಿನಲ್ಲಿ ಗರಿಷ್ಠ 36, ದಾವಣಗೆರೆ ಜಿಲ್ಲೆಯಲ್ಲಿ ಗರಿಷ್ಠ 39 ಡಿಗ್ರಿ, ಹುಬ್ಬಳ್ಳಿಯಲ್ಲಿ ಗರಿಷ್ಠ 39, ಚಿತ್ರದುರ್ಗ ಜಿಲ್ಲೆಯಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. 

ಅಂತೆಯೇ ಹಾವೇರಿಯಲ್ಲಿ ಗರಿಷ್ಠ 39, ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ 41 ಡಿಗ್ರಿ, ಗದಗ ಜಿಲ್ಲೆಯಲ್ಲಿ ಗರಿಷ್ಠ 39 ಡಿಗ್ರಿ ಕೊಪ್ಪಳದಲ್ಲಿ ಗರಿಷ್ಠ 39 ಡಿಗ್ರಿ, ರಾಯಚೂರಿನಲ್ಲಿ 41 ಗರಿಷ್ಠ, ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ 41, ವಿಜಯಪುರದಲ್ಲಿ ಗರಿಷ್ಠ 39, ಬೀದರ್ ಜಿಲ್ಲೆಯಲ್ಲಿ ಗರಿಷ್ಠ 38, ಕಲಬುರಗಿಯಲ್ಲಿ ಗರಿಷ್ಠ 41, ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಏಪ್ರಿನ್ 18ರನಂತರ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ
ಇನ್ನುಬಿಸಿಲಿನ ಧಗೆಯಿಂದ ಬೇಸರಗೊಂಡಿರುವ ರಾಜ್ಯದ ಜನತೆಗೆ ಶೀಘ್ರದಲ್ಲೇ ಮಳೆರಾಯ ತಂಪೆರೆಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದ್ದು, ಏಪ್ರಿಲ್ 18ರ ನಂತರ ಬೆಂಗಳೂರಿನಲ್ಲಿ ಉತ್ತಮವಾಗಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. 

ಆಂಧ್ರ ಪ್ರದೇಶದಲ್ಲಿ 40 ಡಿಗ್ರಿ ದಾಟಿದ ತಾಪಮಾನ
ಕರ್ನಾಟಕ ಮಾತ್ರವಲ್ಲ.. ನೆರೆಯ ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಹಗಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ನಂದ್ಯಾಲ್ ಜಿಲ್ಲೆಯ ದೊರ್ನಿಪಾಡು ಮಂಡಲದಲ್ಲಿ ಗರಿಷ್ಠ 44.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com