ದೇಶ

ರಾಜಸ್ಥಾನ: ಅನಾರೋಗ್ಯದಿಂದ ಓದಲಾಗದೇ ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿ, 19 ವರ್ಷದ NEET ಆಕಾಂಕ್ಷಿ ಆತ್ಮಹತ್ಯೆ!

Srinivasamurthy VN

ಕೋಟಾ: ಅನಾರೋಗ್ಯದಿಂದ ಸರಿಯಾಗಿ ವಿಧ್ಯಾಭ್ಯಾಸ ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕೇ 19 ವರ್ಷದ NEET (National Eligibility-cum-Entrance Test) ಆಕಾಂಕ್ಷಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಕೋಟಾ ಜಿಲ್ಲೆಯ ತಲ್ವಾಂಡಿ ಪ್ರದೇಶದಲ್ಲಿ ತನ್ನ ಹಾಸ್ಟೆಲ್ ಕೋಣೆಯಲ್ಲಿ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ವಿದ್ಯಾರ್ಥಿನಿಯನ್ನು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ನಿವಾಸಿ ರಾಶಿ ಜೈನ್ ಎಂದು ಗುರುತಿಸಲಾಗಿದೆ. ರಾಶಿ ಜೈನ್ ಕೋಟಾದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ಒಂದು ವರ್ಷದಿಂದ ತಯಾರಿ ನಡೆಸುತ್ತಿದ್ದರು ಮತ್ತು ಮೇ 7 ರಂದು ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಪರೀಕ್ಷೆಗೆ ಮುನ್ನವೇ ಆಕೆ ಸಾವನ್ನಪ್ಪಿದ್ದಾಳೆ.

ಸೋಮವಾರ ಸಂಜೆ ತನ್ನ ಹಾಸ್ಟೆಲ್ ಕೋಣೆಯ ಹೊರಗೆ ರಾಶಿ ಜೈನ್ ಕೊನೆಯದಾಗಿ ಕಾಣಿಸಿಕೊಂಡಿದ್ದಳು ಎಂದು ಆಕೆಯ ಸಹವರ್ತಿಗಳು ತಿಳಿಸಿದ್ದಾರೆ. ಮಂಗಳವಾರ ಬೆಳಗಿನ ಜಾವದವರೆಗೂ ಆಕೆ ಕೊಠಡಿಯಿಂದ ಹೊರಗೆ ಬಾರದಿದ್ದಾಗ ಹಾಸ್ಟೆಲ್ ವಾರ್ಡನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಆಕೆಯ ಕೊಠಡಿಯನ್ನು ಒಡೆದಿದ್ದಾರೆ. ಈ ವೇಳೆ ರಾಶಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಜವಾಹರ್ ನಗರ ಪೊಲೀಸ್ ಠಾಣೆಯ ಸಹಾಯಕ ಸರ್ಕಲ್ ಇನ್ಸ್‌ಪೆಕ್ಟರ್ ವಾಸುದೇವ್ ತಿಳಿಸಿದ್ದಾರೆ.

ರಾಶಿ ಅವರ ಮೇಜಿನ ಮೇಲೆ ಹಲವಾರು ಔಷಧಿಗಳ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಕೊಠಡಿಯಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ವರದಿಯಲ್ಲಿ ರಾಶಿ ಅನಾರೋಗ್ಯದ ಕಾರಣದಿಂದ ತನ್ನನ್ನು ಸಂಪೂರ್ಣವಾಗಿ ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಗದೆ ಅಸಮಾಧಾನಗೊಂಡಿದ್ದಳು. ಇದರಿಂದ ಪರೀಕ್ಷೆಯಲ್ಲಿ ತಾನು ಫೇಲ್ ಆಗುತ್ತೇನೆ ಎಂಬ ಭೀತಿಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು. ಆದಾಗ್ಯೂ ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಅಮರ್ ಸಿಂಗ್ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಬುಧವಾರ ಮೃತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
 

SCROLL FOR NEXT