ದೇಶ

ಮಾನನಷ್ಟ ಮೊಕದ್ದಮೆ: ಏಪ್ರಿಲ್ 29 ರಂದು ರಾಹುಲ್ ಗಾಂಧಿ ಅರ್ಜಿ ವಿಚಾರಣೆ: ಗುಜರಾತ್ ಹೈಕೋರ್ಟ್

Srinivasamurthy VN

ಅಹ್ಮದಾಬಾದ್: ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್ ನಲ್ಲಿ ಸೂರತ್ ಕೋರ್ಟ್ ನ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಪುನರ್ ಪರಿಶೀಲನಾ ಆರ್ಜಿಯನ್ನು ಏಪ್ರಿಲ್ 29 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಗುಜರಾತ್ ಹೈಕೋರ್ಟ್ ಗುರುವಾರ ತಿಳಿಸಿದೆ.

ತಮ್ಮ 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆಯಾಜ್ಞೆ ನಿರಾಕರಿಸಿದ ಸೂರತ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್‌ನ ನೂತನ ನ್ಯಾಯಾಧೀಶರು ಏಪ್ರಿಲ್ 29 ರಂದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಹೈಕೋರ್ಟ್ ಗುರುವಾರ ಪ್ರಕಟಿಸಿದ ಕಾರಣ ಪಟ್ಟಿಯ ಪ್ರಕಾರ, ರಾಹುಲ್ ಗಾಂಧಿ ಅವರ ಮನವಿಯನ್ನು ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ಏಪ್ರಿಲ್ 29 ರಂದು ವಿಚಾರಣೆ ನಡೆಸಲಿದ್ದಾರೆ.

ಇದಕ್ಕೂ ಮುನ್ನ ಏಪ್ರಿಲ್ 26 ರಂದು, ರಾಹುಲ್ ಗಾಂಧಿ ಪರ ವಕೀಲರಾದ ಪಿ.ಎಸ್.ಚಂಪನೇರಿ ಅವರು ನ್ಯಾಯಮೂರ್ತಿ ಗೀತಾ ಗೋಪಿ ಅವರ ಮುಂದೆ ಪ್ರಕರಣವನ್ನು ಪ್ರಸ್ತಾಪಿಸಿದಾಗ, ಅವರು "ನನ್ನ ಮುಂದೆ ಅಲ್ಲ" ಎಂದು ಹೇಳುವ ಮೂಲಕ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಇದೀಗ ಈ ಪ್ರಕರಣದ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್‌ನ ನೂತನ ನ್ಯಾಯಾಧೀಶರು ನಡೆಸಲಿದ್ದಾರೆ.

ಭಾರತೀಯ ಜನತಾ ಪಕ್ಷ (BJP)ದ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ 2019 ರ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 (ಕ್ರಿಮಿನಲ್ ಮಾನನಷ್ಟ) ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿದ ನಂತರ ಮಾರ್ಚ್ 23 ರಂದು ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ನಂತರ, 2019 ರಲ್ಲಿ ಕೇರಳದ ವಯನಾಡಿನಿಂದ ಲೋಕಸಭೆಗೆ ಚುನಾಯಿತರಾದ ರಾಹುಲ್ ಗಾಂಧಿ ಅವರನ್ನು ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಂಸತ್ ಸದಸ್ಯರಾಗಿ ಅನರ್ಹಗೊಳಿಸಲಾಯಿತು.

ಬಳಿಕ ರಾಹುಲ್ ಗಾಂಧಿ ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಅರ್ಜಿಯ ಜೊತೆಗೆ ಆದೇಶವನ್ನು ಪ್ರಶ್ನಿಸಿದರು. ಅಂತೆಯೇ ಅವರಿಗೆ ಜಾಮೀನು ನೀಡುವಾಗ, ಏಪ್ರಿಲ್ 20 ರಂದು ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಲು ನಿರಾಕರಿಸಿತ್ತು.

SCROLL FOR NEXT