ದೇಶ

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆ ವಿಚಾರ; ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಶಶಿಕಲಾ

Ramyashree GN

ಚೆನ್ನೈ: ಉಚ್ಛಾಟಿತ ನಾಯಕಿ ಹಾಗೂ ಎಐಎಡಿಎಂಕೆಯ ಮಾಜಿ ಹಂಗಾಮಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.

ಈ ವಿಚಾರದಲ್ಲಿ ಆಕೆ ಸಲ್ಲಿಸಿದ್ದ ಕೇವಿಯಟ್ ಅನ್ನು ಈ ಹಿಂದೆ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಅವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ ಎಂಬುದನ್ನು ಗಮನಿಸಬಹುದು.

ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಕಟವರ್ತಿಯಾಗಿದ್ದ ಶಶಿಕಲಾ ಅವರನ್ನು 2016ರ ಡಿಸೆಂಬರ್ 29ರಂದು ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಆದರೆ, ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ 2017ರ ಫೆಬ್ರವರಿಯಲ್ಲಿ ಜೈಲು ಪಾಲಾಗಿದ್ದರು. ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಅವರು ಜೈಲು ಪಾಲಾದ ನಂತರ, 2017ರ ಸೆಪ್ಟೆಂಬರ್‌ನಲ್ಲಿ ನಡೆದ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ಅವರ ಸೋದರಳಿಯ, ಮಾಜಿ ಶಾಸಕರೂ ಆಗಿದ್ದ ಟಿಟಿವಿ ದಿನಕರನ್ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಎಐಎಡಿಎಂಕೆ ನಾಯಕರಾದ ಒ ಪನ್ನೀರಸೆಲ್ವಂ (ಒಪಿಎಸ್) ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರನ್ನು ಕ್ರಮವಾಗಿ ಪಕ್ಷದ ಸಂಯೋಜಕ ಮತ್ತು ಜಂಟಿ ಸಂಯೋಜಕರನ್ನಾಗಿ ನೇಮಿಸಲಾಗಿದೆ.

ಶಶಿಕಲಾ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿರುವುದನ್ನು ಪ್ರಶ್ನಿಸಿ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಹೊರಬಂದ ನಂತರ ಅವರು ಚೆನ್ನೈ ನಗರ ನ್ಯಾಯಾಲಯದ ಮೊರೆ ಹೋಗಿದ್ದರು. ಆದಾಗ್ಯೂ, ಚೆನ್ನೈ 1V ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಆಕೆಯ ಅರ್ಜಿಯನ್ನು ವಜಾಗೊಳಿಸಿತು. ನಂತರ ಅವರು ಮದ್ರಾಸ್ ಹೈಕೋರ್ಟ್‌ಗೆ ತೆರಳಿದರು. ಅದು ಕೂಡ ಅವರ ಮನವಿಯನ್ನು ತಿರಸ್ಕರಿಸಿತು.

ಮಾಜಿ ಹಂಗಾಮಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿಯನ್ನು ಸಲ್ಲಿಸಿರುವುದು ಒ. ಪನ್ನೀರಸೆಲ್ವಂ ಪಾಳಯದ ರಾಜಕೀಯ ನಡೆ ಎಂದು ಪರಿಗಣಿಸಲಾಗಿದ್ದು, ಅವರು ಈಗ ಶಶಿಕಲಾ ಅವರು ಅವರೊಂದಿಗೆ ಕೈಜೋಡಿಸಿದ್ದಾರೆ.

SCROLL FOR NEXT