ದೇಶ

ಕುಸ್ತಿಪಟುಗಳ ಪ್ರತಿಭಟನೆಗೆ ಟೀಕೆ: ಪಿಟಿ ಉಷಾ ವಿರುದ್ಧ ಪ್ರತಿಪಕ್ಷಗಳ ತೀವ್ರ ವಾಗ್ದಾಳಿ

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಯನ್ನು ಟೀಕಿಸಿದ್ದಕ್ಕಾಗಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ​​ಅಧ್ಯಕ್ಷೆ ಪಿಟಿ ಉಷಾ ಅವರ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದು, ಅವರು ರಾಜಕೀಯ ಮುಖವಾಣಿಯಾಗಿದ್ದಾರೆ ಎಂದು ಆರೋಪಿಸಿವೆ.

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪದಲ್ಲಿ ಕುಸ್ತಿಪಟುಗಳು ಎರಡನೇ ಸುತ್ತಿನ ಪ್ರತಿಭಟನೆ ಆರಂಭಿಸಿದ್ದಾರೆ. ಕುಸ್ತಿಪಟುಗಳಲ್ಲಿ ಶಿಸ್ತಿನ ಕೊರತೆಯಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯವಾಗಿದೆ. ಅವರ ಕ್ರಮವು ದೇಶದ ಘನತೆಗೆ ಕಳಂಕ ತಂದಿದೆ ಎಂದು ರಾಜ್ಯಸಭಾ ಸದಸ್ಯೆಯಾಗಿರುವ ಪಿಟಿ ಉಷಾ ಹೇಳಿದ್ದಾರೆ. 

ಉಷಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್, ಕುಸ್ತಿಪಟುಗಳ ಮನವಿ ನಿರ್ಲಕ್ಷಿಸುವುದು ದೇಶದ ಘನತೆಗೆ ಧಕ್ಕೆ ತರುತ್ತದೆ. ಕ್ರೀಡಾಪಟುಗಳ ಸಮರ್ಥನೀಯ ಪ್ರತಿಭಟನೆ ಅವಹೇಳನ ಮಾಡುವುದು  ಆಗುವುದಿಲ್ಲ. ಅವರ ಹಕ್ಕುಗಳಿಗಾಗಿ ಅವರು ಪ್ರತಿಭಟಿಸುವುದು 'ರಾಷ್ಟ್ರದ ಪ್ರತಿಷ್ಠೆಗೆ ಕಳಂಕ ತರುವುದಿಲ್ಲ ಎಂದಿದ್ದಾರೆ. 

ಸಂಕಷ್ಟದಲ್ಲಿರುವ ಕುಸ್ತಿಪಟುಗಳ ಬಗ್ಗೆ ಹೇಳಿಕೆಯನ್ನು ಪಿಟಿ ಉಷಾ ಅವರು ನಿಲ್ಲಿಸಬೇಕಾಗಿದೆ. ಹೊಸ ಸ್ನೇಹಿತರು ಅವರನ್ನು ರಾಜಕೀಯ ಮುಖವಾಣಿ ಮಾಡಲು ಬಯಸುತ್ತಿದ್ದಾರೆ ಎಂದು ಸಿಪಿಐ ಸಂಸದ ಬಿನೋಯ್ ವಿಶ್ವಂ ಟೀಕಿಸಿದ್ದಾರೆ.

ರಾಜ್ಯಸಭಾ ಸದಸ್ಯೆಯಾಗಿರುವುದರಿಂದ ಪಿಟಿ ಉಷಾ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.

ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ತನಿಖೆಯ ಮೇಲ್ವಿಚಾರಣಾ ಸಮಿತಿಯ ಸಂಶೋಧನೆಗಳನ್ನು ಸರ್ಕಾರವು ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿ, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಉನ್ನತ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

SCROLL FOR NEXT