ದೇಶ

ಬಿಹಾರ: ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ, ಮಾಜಿ ಬಿಜೆಪಿ ಶಾಸಕ ಬಂಧನ

Nagaraja AB

ಸಸಾರಂ: ಬಿಹಾರದ ಸಸಾರಂ ಜಿಲ್ಲೆಯಲ್ಲಿ ಕಳೆದ ತಿಂಗಳು ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಭುಗಿಲೆದಿದ್ದ ಕೋಮು ಹಿಂಸಾಚಾರದ ತನಿಖೆಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಜವಾಹರ್ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಪಸಂಖ್ಯಾತರನ್ನು ಸಮಾಧಾನಪಡಿಸಲು ಮಾಜಿ ಶಾಸಕರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಸಸಾರಂ ವಿಧಾನಸಭಾ ಕ್ಷೇತ್ರದಿಂದ ಐದು ಅವಧಿಗೆ ಶಾಸಕರಾಗಿ, ಈಗ ಮಾಜಿಯಾಗಿರುವ ಪ್ರಸಾದ್ ಅವರನ್ನು ಶುಕ್ರವಾರ ರಾತ್ರಿ ಅವರ ಮನೆಯಿಂದ ಬಂಧಿಸಲಾಗಿದೆ. ರೋಹ್ತಾಸ್ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ನಡೆದ ರಾಮನವಮಿ ಮೆರವಣಿಗೆ ವೇಳೆಯಲ್ಲಿ ಕ್ರಮವಾಗಿ ರೋಹ್ತಾಸ್ ಮತ್ತು ನಳಂದಾ ಜಿಲ್ಲೆಗಳ ಜಿಲ್ಲಾ ಕೇಂದ್ರವಾದ ಸಸಾರಾಮ್ ಮತ್ತು ಬಿಹಾರ ಷರೀಫ್ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ.

ಪ್ರಸಾದ್ ಬಂಧನ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ತರಲಾಗುವುದು. ತನಿಖಾಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದು, ಪೊಲೀಸ್ ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದಾರೆ.  

ಮತ್ತೊಂದೆಡೆ, ಆಡಳಿತಾರೂಢ ಮೈತ್ರಿಕೂಟದ ತುಷ್ಟೀಕರಣ ರಾಜಕೀಯವನ್ನು ಮತ್ತಷ್ಟು ಹೆಚ್ಚಿಸಲು ಪ್ರಸಾದ್ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

SCROLL FOR NEXT