ದೇಶ

ಮಹಾರಾಷ್ಟ್ರ: ನಕ್ಸಲ್ ಕಮಾಂಡರ್ ಸೇರಿದಂತೆ ಮೂವರು ಮಾವೋವಾದಿಗಳ ಹತ್ಯೆ

Nagaraja AB

ಗಡ್ಚಿರೋಲಿ:  ಮಹಾರಾಷ್ಟ್ರದ  ಗಡ್ಚಿರೋಲಿ ಜಿಲ್ಲೆಯಲ್ಲಿ ಭಾನುವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಕಮಾಂಡರ್ ಸೇರಿದಂತೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ ಕೆದ್ಮಾರಾ ಅರಣ್ಯದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದರು.

ಮಾವೋವಾದಿಗಳ ಪೆರಿಮಿಲಿ ಮತ್ತು ಅಹೇರಿ ದಳದ ಸದಸ್ಯರು ಮನೆ ರಾಜಾರಾಂ ಮತ್ತು ಪೆರಿಮಿಲಿ ಸಶಸ್ತ್ರ ಹೊರಠಾಣೆ ನಡುವಿನ ಅರಣ್ಯ ಪ್ರದೇಶದಲ್ಲಿರುವ ಬಗ್ಗೆ ಪೊಲೀಸರಿಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಸಿ-60 ಪೊಲೀಸ್ ಪಡೆಯ ಎರಡು ತುಕಡಿಯನ್ನು ಕಳುಹಿಸಲಾಗಿತ್ತು.

ಶೋಧ ಕಾರ್ಯಾಚರಣೆಯ ವೇಳೆ ನಕ್ಸಲರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಪೊಲೀಸರು ಪ್ರತಿದಾಳಿ ನಡೆಸಿರುವುದಾಗಿ ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ. 

 ಗುಂಡಿನ ಚಕಮಕಿ ನಂತರ, ಮೂವರು ಪುರುಷ ನಕ್ಸಲರ ಶವಗಳನ್ನು ಶಸ್ತ್ರಾಸ್ತ್ರಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಮೃತರಲ್ಲಿ ಒಬ್ಬರನ್ನು ಪೆರಿಮಿಲಿ ದಳದ ಕಮಾಂಡರ್ ಬಿಟ್ಲು ಮಾದವಿ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರನ್ನು ಪೆರಿಮಿಲಿ ದಳದ ವಾಸು ಮತ್ತು ಆಹೇರಿ ದಳದ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

SCROLL FOR NEXT