ದೇಶ

ಸಿಎಂ ಗೆಹ್ಲೋಟ್ ಕುರಿತು ರಾವಣ ಹೇಳಿಕೆ: ಕೇಂದ್ರ ಸಚಿವ ಶೇಖಾವತ್ ವಿರುದ್ಧ ಪ್ರಕರಣ ದಾಖಲು

Nagaraja AB

ರಾಜಸ್ಥಾನ: ಇತ್ತೀಚಿಗೆ ನಡೆದ ರ್‍ಯಾಲಿಯೊಂದರಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕುರಿತು ನೀಡಿದ್ದ ಹೇಳಿಕೆ ಆರೋಪದ ಮೇರೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ಚಿತ್ತೋರ್‌ಗಢದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಸುರೇಂದ್ರ ಸಿಂಗ್ ಜಾದಾವತ್  ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ. ಚಿತ್ತೋರ್‌ಗಢದಲ್ಲಿ ಗುರುವಾರ ನಡೆದ ಬಿಜೆಪಿಯ ಜನ ಆಕ್ರೋಶ ರ್‍ಯಾಲಿಯಲ್ಲಿ ಗೆಹ್ಲೋಟ್ ಅವರನ್ನು "ರಾಜಸ್ಥಾನದಲ್ಲಿ ರಾಜಕೀಯದ ರಾವಣ" ಎಂದು ಬಣ್ಣಿಸಿದ್ದ ಶೇಖಾವತ್, ರಾಜ್ಯದಲ್ಲಿ ರಾವಣ ರಾಜ್ಯವನ್ನು ನಿರ್ಮೂಲನೆ ಮಾಡಬೇಕು ಎಂದು ಜನರಿಗೆ ಕರೆ ನೀಡಿದ್ದರು. 

"ರಾಜಸ್ಥಾನದ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಕ್ಕಾಗಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದಾಗಿ ಜಾದಾವತ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 153-ಎ (ಧರ್ಮ, ಜನಾಂಗ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295-ಎ (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಲು ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು)  500 (ಮಾನಹಾನಿ) ಮತ್ತು 504ರ ಅಡಿ (ಶಾಂತಿಗೆ ಭಂಗ ತರುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

SCROLL FOR NEXT