ದೇಶ

ಮಹಾರಾಷ್ಟ್ರದ ಥಾಣೆಯಲ್ಲಿ ಕ್ರೇನ್ ಅಪಘಾತ: ಪ್ರಧಾನಿ ಮೋದಿ, ಮುಖ್ಯಮಂತ್ರಿ ಶಿಂಧೆ ಸಂತಾಪ; ಪರಿಹಾರ ಘೋಷಣೆ

Sumana Upadhyaya

ನವದೆಹಲಿ/ಪುಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರದಲ್ಲಿ ಸಂಭವಿಸಿದ ಭೀಕರ ಕ್ರೇನ್ ಕುಸಿತ ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 

ಇಂದು ಮಂಗಳವಾರ ನಸುಕಿನ ಜಾವ ಥಾಣೆ ಜಿಲ್ಲೆಯ ಶಹಾಪುರ ತಹಸಿಲ್‌ನಲ್ಲಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಮೂರನೇ ಹಂತದ ನಿರ್ಮಾಣದ ವೇಳೆ ಕ್ರೇನ್ ಸೇತುವೆಯ ಚಪ್ಪಡಿಯ ಮೇಲೆ ಬಿದ್ದ ಪರಿಣಾಮ 16 ಕಾರ್ಮಿಕರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.

ಮೂವರಿಂದ ಐದು ಜನರು ಇನ್ನೂ ಸಿಕ್ಕಿಬಿದ್ದಿದ್ದಾರೆ, ಅವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಸೇತುವೆ ನಿರ್ಮಾಣದಲ್ಲಿ ಮತ್ತು ಹೆದ್ದಾರಿ ನಿರ್ಮಾಣ ಯೋಜನೆಗಳಲ್ಲಿ ಪ್ರಿಕಾಸ್ಟ್ ಬಾಕ್ಸ್ ಗರ್ಡರ್‌ಗಳನ್ನು ಸ್ಥಾಪಿಸಲು ಬಳಸಲಾಗುವ ವಿಶೇಷ ಉದ್ದೇಶದ ಮೊಬೈಲ್ ಗ್ಯಾಂಟ್ರಿ ಕ್ರೇನ್ ಆಗಿತ್ತು.

ಮುಂಬೈನಿಂದ 80 ಕಿಮೀ ದೂರದಲ್ಲಿರುವ ಶಹಾಪುರ ತೆಹಸಿಲ್‌ನ ಸರ್ಲಾಂಬೆ ಗ್ರಾಮದ ಬಳಿ ನಸುಕಿನ ಜಾವ ಅಪಘಾತ ಸಂಭವಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಕಾರ್ಯಾಲಯ, ಮಹಾರಾಷ್ಟ್ರದ ಶಹಾಪುರದಲ್ಲಿ ಸಂಭವಿಸಿದ ಭೀಕರ ದುರ್ಘಟನೆಯಿಂದ ನೋವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ದೊರೆತು ಶೀಘ್ರ ಗುಣಮುಖರಾಗಲಿ. ಎನ್ ಡಿಆರ್ ಎಫ್ ಮತ್ತು ಸ್ಥಳೀಯ ಆಡಳಿತವು ಕಾರ್ಯನಿರ್ವಹಿಸುತ್ತಿದೆ. ಅಪಘಾತದ ಸ್ಥಳದಲ್ಲಿ ಮತ್ತು ಸಂತ್ರಸ್ತರಿಗೆ ಸರಿಯಾದ ಸಹಾಯವನ್ನು ಒದಗಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು. 

ಪ್ರತಿಯೊಬ್ಬ ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು. ಗಾಯಾಳುಗಳಿಗೆ 50,000 ರೂಪಾಯಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಈ ಅಹಿತಕರ ಘಟನೆ ನಡೆದಿದೆ.

ಸಮೃದ್ಧಿ ಹೆದ್ದಾರಿಯ ಮೂರನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ರಾತ್ರಿಯೂ ಸಮೃದ್ಧಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಈ ದುರ್ಘಟನೆ ನಡೆದಿದೆ. ಶಹಪುರ ಸರಳಂಬೆಯಲ್ಲಿ ಈ ಘಟನೆ ನಡೆದಿದೆ. ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ.

ಗರ್ಡರ್ ಯಂತ್ರ ಮತ್ತು ಸ್ಲ್ಯಾಬ್ ಸಂಪರ್ಕಿಸುವ ಕ್ರೇನ್ ನೂರಾರು ಅಡಿ ಎತ್ತರದಿಂದ ಕಾರ್ಮಿಕರ ಮೇಲೆ ಬಿದ್ದಿದೆ. ಶಹಪುರ ಉಪ ಜಿಲ್ಲಾ ಆಸ್ಪತ್ರೆಗೆ ಇದುವರೆಗೆ 16 ಮೃತದೇಹಗಳನ್ನು ತೆಗೆಯಲಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿಗಳಿಂದ ಪರಿಹಾರ ಘೋಷಣೆ: ಥಾಣೆಯ ಶಹಾಪುರದಲ್ಲಿ ಗಿರ್ಡರ್ ಯಂತ್ರ ಕುಸಿತದ ಬಗ್ಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯೆ ನೀಡಿ, ಮೃತರ ಸಮೀಪ ಬಂಧುಗಳಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಇದೊಂದು ತೀರಾ ಅಚಾನಕ ದುರದೃಷ್ಟಕರ ಘಟನೆ ಎಂದು ಹೇಳಿದ್ದಾರೆ.

ಸ್ವಿಟ್ಜರ್ಲೆಂಡ್ ಮೂಲದ ಕಂಪನಿಯೊಂದು ಇಲ್ಲಿ ಕೆಲಸ ಮಾಡುತ್ತಿದೆ. ಘಟನೆ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು. NDRF ತಂಡವು ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಕ್ಕೆ ಸೂಚನೆಗಳನ್ನು ನೀಡಿದೆ. ನಮ್ಮ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸಚಿವರು ಸ್ಥಳದಲ್ಲಿದ್ದಾರೆ ಎಂದು ಹೇಳಿದ್ದಾರೆ.

SCROLL FOR NEXT