ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರ ಪುತ್ರ ಪಿ ರವೀಂದ್ರನಾಥ್ ಅವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ತನಗೆ ಮತ್ತು ತನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ರವೀಂದ್ರನಾಥ್ ಅವರು ನನಗೆ ಫೋನ್ ಮಾಡಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ರವೀಂದ್ರನಾಥ್ ಅವರು ತನಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಕೋರಿ ಮಹಿಳೆ ಮಂಗಳವಾರ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಕಚೇರಿಗೆ ದೂರು ನೀಡಿದ್ದಾರೆ.
ಇದನ್ನು ಓದಿ: ನಿಮ್ಮ ಪುತ್ರ ಎಷ್ಟು ಕ್ರಿಕೆಟ್ ಪಂದ್ಯ ಆಡಿದ್ದಾರೆ, ಎಷ್ಟು ರನ್ ಗಳಿಸಿದ್ದಾರೆ: ಅಮಿತ್ ಶಾ ಕಾಲೆಳೆದ ಉದಯನಿಧಿ ಸ್ಟಾಲಿನ್!
ವರದಿಗಳ ಪ್ರಕಾರ, 2014 ರಲ್ಲಿ ಓ ಪನ್ನೀರಸೆಲ್ವಂ ಅವರ ಮಗನನ್ನು ಮದುವೆ ಸಮಾರಂಭದಲ್ಲಿ ತಾನು ಭೇಟಿಯಾಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಕೊಡೈಕೆನಾಲ್‌ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಸ್ನೇಹಿತೆ ನಾಗಪ್ರಿಯಾ ಅವರು ತನ್ನನ್ನು ರವೀಂದ್ರನಾಥ್, ಅವರ ಪತ್ನಿ ಅನಂತಿ ಮತ್ತು ಅವರ ಸಹೋದರಿ ಕವಿತಾಗೆ ಪರಿಚಯಿಸಿದರು ಎಂದು ಮಹಿಳೆ ತಿಳಿಸಿದ್ದಾರೆ.
2022 ರಲ್ಲಿ ತಾನು ಪತಿಯಿಂದ ವಿಚ್ಛೇದನ ಪಡೆದಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಇದನ್ನು ಬಳಸಿಕೊಂಡ ರವೀಂದ್ರನಾಥ್ ನನಗೆ ಕರೆ ಮಾಡಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಏಪ್ರಿಲ್ ತಿಂಗಳಿನಲ್ಲಿ ರವೀಂದ್ರನಾಥ್ ಅವರೇ ಮಧ್ಯರಾತ್ರಿ 1 ಗಂಟೆಗೆ ವಾಟ್ಸಾಪ್ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.