ದೇಶ

INDIA ಒಕ್ಕೂಟವು ದೇಶವನ್ನು ವಿಪತ್ತು, ಕೋಮು ಉದ್ವಿಗ್ನತೆಯಿಂದ ರಕ್ಷಿಸುತ್ತದೆ: ಮಮತಾ ಬ್ಯಾನರ್ಜಿ

Ramyashree GN

ಕೋಲ್ಕತ್ತಾ: 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ವಿರೋಧ ಪಕ್ಷಗಳ ಒಕ್ಕೂಟವಾದ INDIA ದೇಶವನ್ನು ವಿಪತ್ತು, ಕೋಮು ಉದ್ವಿಗ್ನತೆ ಮತ್ತು ನಿರುದ್ಯೋಗ ಸಮಸ್ಯೆಯಿಂದ ರಕ್ಷಿಸುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪ್ರತಿಪಾದಿಸಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

2024ರ ಚುನಾವಣೆಯಲ್ಲಿ INDIA ಗೆದ್ದು ಸರ್ಕಾರ ರಚಿಸಲಿದೆ. ಇದು ದೇಶವನ್ನು ವಿಪತ್ತು, ಕೋಮು ಉದ್ವಿಗ್ನತೆ ಮತ್ತು ನಿರುದ್ಯೋಗದಿಂದ ರಕ್ಷಿಸುತ್ತದೆ ಎಂದು ಅವರು ರಾಜ್ಯ ಸಚಿವಾಲಯದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವಾಗ ಸುದ್ದಿಗಾರರಿಗೆ ತಿಳಿಸಿದರು.

'ಭಾರತ ನಮ್ಮ ಮಾತೃಭೂಮಿ. ಆದ್ದರಿಂದ, INDIA ಒಕ್ಕೂಟವು ಮಾತೃಭೂಮಿಯಿಂದ, ಮಾತೃಭೂಮಿಗಾಗಿ ಮತ್ತು ಮಾತೃಭೂಮಿಗೆ ಸಂಬಂಧಿಸಿದೆ. ಆದರೆ, ಎನ್‌ಡಿಎಯಲ್ಲಿ ಯಾವುದೇ ಮೌಲ್ಯವಿಲ್ಲ. ಇಷ್ಟು ವರ್ಷಗಳಿಂದ ಅವರು ತಮ್ಮ ನಡುವೆ ಯಾವುದೇ ಸಭೆ ನಡೆಸಲಿಲ್ಲ' ಎಂದು ಅವರು ಹೇಳಿದರು. 

'ಇವಿಎಂಗಳನ್ನು ಹ್ಯಾಕ್ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ತನಗೆ ಸಿಕ್ಕಿದೆ. ಅವರು ಈಗಾಗಲೇ (ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ) ಯೋಜನೆ ರೂಪಿಸಿದ್ದಾರೆ. ಅವರು (ಬಿಜೆಪಿ) ಇವಿಎಂಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಆ ಬಗ್ಗೆ ಮಾಹಿತಿ ಸಿಕ್ಕಿದೆ ಮತ್ತು ಈಗಾಗಲೇ ಕೆಲವು ಪುರಾವೆಗಳು ಸಿಕ್ಕಿವೆ. ನಾವು ಹೆಚ್ಚಿನದನ್ನು ಹುಡುಕುತ್ತಿದ್ದೇವೆ. INDIA ಒಕ್ಕೂಟದ ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು' ಎಂದು ಅವರು ಹೇಳಿದರು.

'ಹಿಂಸಾಚಾರ ಎಂಬುದು ಯಾವಾಗಲೂ 'ಬಿಜೆಪಿ ನಿಘಂಟಿನ' ಭಾಗವಾಗಿದೆ. ಅವರ ನಿಘಂಟಿನಲ್ಲಿ ಸಂವಿಧಾನವಿಲ್ಲ. ಆದರೆ, ಹಿಂಸೆ ಇದೆ' ಎಂದು ಮಮತಾ ಆರೋಪಿಸಿದರು.

ಈ ಆರೋಪಗಳನ್ನು ತಳ್ಳಿಹಾಕಿರುವ ರಾಜ್ಯ ಬಿಜೆಪಿಯ ಹಿರಿಯ ನಾಯಕ ರಾಹುಲ್ ಸಿನ್ಹಾ, ಚುನಾವಣೆಯನ್ನು ಯಾರು ಹ್ಯಾಕ್ ಮಾಡುತ್ತಾರೆ ಎಂಬುದನ್ನು ಇಡೀ ದೇಶ ನೋಡಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಾಗ ಟಿಎಂಸಿ ಇವಿಎಂಗಳ ಬಗ್ಗೆ ದೂರು ನೀಡಿರಲಿಲ್ಲ ಎಂದಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯ ರಂಗಂನಲ್ಲಿ ದ್ವಾರಕಾ ನದಿಗೆ ನಿರ್ಮಿಸಲಾದ ಹೊಸ ಸೇತುವೆ ಸೇರಿದಂತೆ ಹಲವಾರು ಯೋಜನೆಗಳನ್ನು ಬ್ಯಾನರ್ಜಿ ಉದ್ಘಾಟಿಸಿದರು.

SCROLL FOR NEXT