ದೇಶ

ಮಣಿಪುರ: ಪೊಲೀಸ್ ಔಟ್ ಫೋಸ್ಟ್ ಗಳಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಲೂಟಿ, ಓರ್ವ ಪೋಲೀಸ್ ಹತ್ಯೆ

Nagaraja AB

ಇಂಫಾಲ: ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಎರಡು ಪೊಲೀಸ್ ಭದ್ರತಾ ಪೋಸ್ಟ್‌ಗಳನ್ನು ಧ್ವಂಸಗೊಳಿಸಿರುವ ಉದ್ರಿಕ್ತ ಗುಂಪುಗಳು, ಬೃಹತ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌತ್ರುಕ್‌ನಲ್ಲಿ ಸಶಸ್ತ್ರ ದಾಳಿಕೋರರು ಮತ್ತು ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.

ಬಿಷ್ಣುಪುರದಲ್ಲಿರುವ ಮಣಿಪುರ ಸಶಸ್ತ್ರ ಪೊಲೀಸ್‌ನ 2ನೇ ಬೆಟಾಲಿಯನ್‌ನ ಕೀರೆನ್‌ಫಾಬಿ ಪೊಲೀಸ್ ಔಟ್‌ಪೋಸ್ಟ್ ಮತ್ತು ತಂಗಲವಾಯ್ ಪೊಲೀಸ್ ಔಟ್‌ಪೋಸ್ಟ್‌ಗೆ ಗುಂಪು ದಾಳಿ ಮಾಡಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗಿದೆ ಎಂದು ಮಣಿಪುರ ಪೊಲೀಸರು ಗುರುವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಗುಂಪು ಅದೇ ಜಿಲ್ಲೆಯ ಹೀಂಗಾಂಗ್ ಪೊಲೀಸ್ ಠಾಣೆ ಮತ್ತು ಸಿಂಗ್‌ಜಮೇ ಪೊಲೀಸ್ ಠಾಣೆಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಭದ್ರತಾ ಪಡೆಗಳು ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಕೌತ್ರುಕ್ ಹರಾಥೆಲ್ ಮತ್ತು ಸೆಂಜಮ್ ಚಿರಾಂಗ್ ಪ್ರದೇಶಗಳಲ್ಲಿ ಸಶಸ್ತ್ರ ದಾಳಿಕೋರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರಿಗೆ ಬುಲೆಟ್ ಗಾಯಗಳಾಗಿವೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ. 

ಕಳೆದ 24 ಗಂಟೆಗಳಲ್ಲಿ, ರಾಜ್ಯದಲ್ಲಿ ಪರಿಸ್ಥಿತಿ ಇನ್ನೂ ಅಸ್ಥಿರ ಮತ್ತು ಉದ್ವಿಗ್ನವಾಗಿದ್ದು, ವಿವಿಧ ಸ್ಥಳಗಳಲ್ಲಿ ಗುಂಡಿನ ದಾಳಿ ಮತ್ತು  ಉದ್ರಿಕ್ತ ಜನರಿಂದ ಅಲ್ಲಲ್ಲಿ ದಾಳಿ ಘಟನೆಗಳು ನಡೆಯುತ್ತಿವೆ. ಭದ್ರತಾ ಪಡೆಗಳು ರಾಜ್ಯದ ದುರ್ಬಲ ಮತ್ತು ಅಂಚಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ದಾಳಿಕೋರರ ಏಳು ಅಕ್ರಮ ಬಂಕರ್‌ಗಳನ್ನು ನಾಶಪಡಿಸಿವೆ.

SCROLL FOR NEXT