ದೇಶ

ಮನ್ರೇಗಾ ಯೋಜನೆ: ಸುಮಾರು 1 ಕೋಟಿಗೂ ಹೆಚ್ಚು ಜಾಬ್ ಕಾರ್ಡ್‌ಗಳು ಇನ್ನೂ ಆಧಾರ್ ಲಿಂಕ್ ಆಗಿಲ್ಲ!

Nagaraja AB

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 33.23 ಲಕ್ಷ ಜಾಬ್ ಕಾರ್ಡ್‌ಗಳನ್ನು ವಿವಿಧ ಕಾರಣಗಳಿಗಾಗಿ ಡಿಲೀಟ್ ಮಾಡಲಾಗಿದ್ದು, ಇನ್ನೂ 1. 14 ಕೋಟಿ ಉದ್ಯೋಗ ಕಾರ್ಡ್ ಗಳು ಆಧಾರ್ ಲಿಂಕ್ ಆಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಂಗಳವಾರ ಲೋಕಸಭೆಗೆ ತಿಳಿಸಿದೆ. 

ಅನಧಿಕೃತ ಉದ್ಯೋಗ ಕಾರ್ಡ್ ಗಳ ಕುರಿತು ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್, ವಂಚನೆ ಸೇರಿದಂತೆ ವಿವಿಧ ಕಾರಣಗಳಿಂದ ಕಾರ್ಡ್‌ಗಳನ್ನು ಡಿಲೀಟ್ ಮಾಡಲಾಗಿದೆ. ಕೆಲಸ ಮಾಡಲು ಇಚ್ಛಿಸದ ವ್ಯಕ್ತಿ, ಸ್ಥಳಾಂತರ ಮತ್ತು ಮರಣ ಕಾರಣಗಳನ್ನು ಸಹ ಇದು ಒಳಗೊಂಡಿದೆ ಎಂದರು. 

ಮೇಘಾಲಯದಲ್ಲಿ ಅತಿ ಹೆಚ್ಚು ಶೇ. 70 ರಷ್ಟು ಅಂದರೆ 3,21,002 ಜಾಬ್ ಕಾರ್ಡ್ ಗಳಿಗೆ ಆಧಾರ್ ಲಿಂಕ್ ಆಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೋರಿಕೆ ತಡೆಯಲು ಹಾಗೂ ನಕಲಿ ಕಾರ್ಡ್ ಗಳನ್ನು ತೆಗೆಯಲು ಸರ್ಕಾರ ಪ್ರಯತ್ನಿಸಿದೆ. ಮೇಘಾಲಯ ನಂತರ ಅಸ್ಸಾಂನಲ್ಲಿ 17,539 ಕೆಲಸಗಾರರು, ನಾಗಾಲ್ಯಾಂಡ್ ನಲ್ಲಿ ಶೇ, 37.2 ರಷ್ಟು ಕೆಲಸಗಾರರ ಜಾಬ್ ಕಾರ್ಡ್ ಗಳು ಆಧಾರ್ ಲಿಂಕ್ ಆಗಿಲ್ಲ ಎಂದು ಅವರು ಮಾಹಿತಿ ನೀಡಿದರು. 

ಇನ್ನೊಂದೆಡೆ ಆಂಧ್ರಪ್ರದೇಶದಲ್ಲಿ ಸುಮಾರು 98.3ರಷ್ಟು  ಎಲ್ಲಾ ಜಾಬ್ ಕಾರ್ಡ್‌ಗಳು ಆಧಾರ್ ಲಿಂಕ್ ಆಗಿವೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿದ್ದಾರೆ. ಉತ್ತರ ಪ್ರದೇಶದಲ್ಲಿ ಇನ್ನೂ  10.9 ಲಕ್ಷ ಉದ್ಯೋಗ ಕಾರ್ಡ್‌ಗಳಿಗೆ ಆಧಾರ್ ಲಿಂಕ್ ಆಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಶೇ. 11 ರಷ್ಟು ಮತ್ತು ಒಡಿಶಾದಲ್ಲಿ 8,34,146 ಕೆಲಸಗಾರರು ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಎಂದು ಅವರು ತಿಳಿಸಿದರು. 

ಮನ್ರೇಗಾ ಕೆಲಸಗಾರರಿಗೆ  ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತದೆ. ಹೊಸ ವ್ಯವಸ್ಥೆಯಲ್ಲಿ, ಆಧಾರ್‌ನೊಂದಿಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಮಾತ್ರ ವೇತನ ಪಾವತಿಯಾಗುತ್ತದೆ.  

SCROLL FOR NEXT